ಬೆಂಗಳೂರು :  ಬಿಬಿಎಂಪಿ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳ ಮತ ಎಣಿಕಾ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮೂರು ಕ್ಷೇತ್ರಗಳಲ್ಲಿ ಕಣದಲ್ಲಿರುವ 78 ಅಭ್ಯರ್ಥಿಗಳ ಭವಿಷ್ಯ ಗುರುವಾರ ನಿರ್ಧಾರವಾಗಲಿದೆ.

ನಗರದ ಮೌಂಟ್‌ ಕಾರ್ಮೆಲ್‌ ಮಹಿಳಾ ಪಿ.ಯು. ಕಾಲೇಜು, ಸೇಂಟ್‌ ಜೋಸೆಫ್‌ ಇಂಡಿಯನ್‌ ಹೈಸ್ಕೂಲ್‌ ಹಾಗೂ ಎಸ್‌ಎಸ್‌ಎಂಆರ್‌ವಿ ಪಿ.ಯು. ಕಾಲೇಜಿನಲ್ಲಿ ಮತ ಎಣಿಕಾ ಕಾರ್ಯ ಗುರುವಾರ ಬೆಳಗ್ಗೆ 8ಕ್ಕೆ ಆರಂಭವಾಗಲಿದೆ. ಬೆಳಗ್ಗೆ 5.30ಕ್ಕೆ ಮೂರು ಮತ ಎಣಿಕಾ ಕೇಂದ್ರದಲ್ಲಿ ಸಿಬ್ಬಂದಿ ಹಾಜರಾಗಲಿದ್ದು, 7ಕ್ಕೆ ಸ್ಟ್ರಾಂಗ್‌ ರೂಂನಿಂದ ಮತಯಂತ್ರಗಳನ್ನು ಹೊರ ತೆಗೆಯಲಿದ್ದಾರೆ. ಬಳಿಕ ಬೆಳಗ್ಗೆ 8ಕ್ಕೆ ಪೋಸ್ಟಲ್‌ ಬ್ಯಾಲೆಟ್‌ ಎಣಿಕೆ ಮೂಲಕ ಮತ ಎಣಿಕೆ ಕಾರ್ಯ ಆರಂಭವಾಗಲಿದೆ.

78 ಅಭ್ಯರ್ಥಿಗಳ ಭವಿಷ್ಯ:

ಮೂರು ಕ್ಷೇತ್ರಗಳಲ್ಲಿ ಒಟ್ಟು 78 ಅಭ್ಯರ್ಥಿಗಳು ತಮ್ಮ ಅದೃಷ್ಟಪರೀಕ್ಷೆಗಿಳಿದಿದ್ದು, ಗುರುವಾರ ಅದು ಪ್ರಕಟವಾಗಲಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ 31 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಕೇಂದ್ರದಲ್ಲಿ 22 ಹಾಗೂ ದಕ್ಷಿಣದಲ್ಲಿ 25 ಸ್ಫರ್ಧಿಸಿದ್ದಾರೆ.

ವಿಧಾನಸಭಾ ಕ್ಷೇತ್ರಕ್ಕೊಂದು ಎಣಿಕಾ ಕೊಠಡಿ:

ಮೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ತಲಾ ಎಂಟು ವಿಧಾನಸಭಾ ಕ್ಷೇತ್ರಗಳು ಬರಲಿವೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕೆ.ಆರ್‌.ಪುರ, ಬ್ಯಾಟರಾಯನಪುರ, ದಾಸರಹಳ್ಳಿ ತಲಾ 26 ಟೇಬಲ್‌, ಯಶವಂತಪುರ 24 ಟೇಬಲ್‌ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಕೇಂದ್ರ ಕ್ಷೇತ್ರದ ಸರ್ವಜ್ಞನಗರ 21 ಟೇಬಲ್‌, ಮಹದೇವಪುರ 28 ಟೇಬಲ್‌, ಬೆಂಗಳೂರು ದಕ್ಷಿಣ ಕ್ಷೇತ್ರದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಗೆ 24 ಟೇಬಲ್‌ ವ್ಯವಸ್ಥೆ ಮಾಡಲಾಗಿದೆ. ಉಳಿದ 15 ವಿಧಾನಸಭಾ ಕ್ಷೇತ್ರದ ಎಣಿಕೆ ಕೊಠಡಿಯಲ್ಲಿ 14 ಟೇಬಲ್‌ ವ್ಯವಸ್ಥೆ ಮಾಡಲಾಗಿದೆ.

ಕಳೆದ ಚುನಾವಣೆಯಲ್ಲಿ 7 ವೀಕ್ಷಕರನ್ನು ನಿಯೋಜಿಸಲಾಗಿದ್ದು ಈ ಬಾರಿ 14 ವೀಕ್ಷಕರನ್ನು ನಿಯೋಜಿಸಲಾಗಿದೆ. ವೀಕ್ಷಕರು ಹಾಗೂ ಮಾಧ್ಯಮದವರನ್ನು ಹೊರತುಪಡಿಸಿ ಬೇರೆಯವರು ಮೊಬೈಲ್‌ ತರುವುದನ್ನು ನಿಷೇಧಿಸಲಾಗಿದೆ.

11 ಸಾವಿರ ಅಂಚೆ ಮತಪತ್ರ:

ಬೆಂಗಳೂರು ನಗರ ಜಿಲ್ಲೆಯ ಮೂರು ಲೋಕಸಭಾ ಕ್ಷೇತ್ರಕ್ಕೆ ಈವರೆಗೆ 11,626 ಅಂಚೆ ಮತ ಪತ್ರ ಸ್ವೀಕೃತವಾಗಿವೆ. ಬೆಂಗಳೂರು ಉತ್ತರ ಕ್ಷೇತ್ರಕ್ಕೆ 4,340, ಕೇಂದ್ರ ಕ್ಷೇತ್ರಕ್ಕೆ 2,878 ಹಾಗೂ ದಕ್ಷಿಣ ಕ್ಷೇತ್ರಕ್ಕೆ 4,408 ಅಂಚೆ ಮತ ಪತ್ರ ಬಂದಿವೆ. ಅದರಲ್ಲಿ 563 ಇಟಿಪಿಬಿಎಸ್‌ ಮತಗಳಿವೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.

ಮೇ 23ರ ಟೈಮ್‌ ಲೈನ್‌

ಬೆಳಗ್ಗೆ 5.30: ಮತ ಎಣಿಕಾ ಸಿಬ್ಬಂದಿ ಹಾಜರಾತಿ

ಬೆಳಗ್ಗೆ 7: ಸ್ಟ್ರಾಂಗ್‌ ರೂಂ ತೆರೆಯಲಾಗುವುದು

ಬೆಳಗ್ಗೆ 8: ಫೋಸ್ಟಲ್‌ ಬ್ಯಾಲೆಟ್‌ ಎಣಿಕೆ ಆರಂಭ

ಬೆಳಗ್ಗೆ 8.30: ಇವಿಎಂ ಮತ ಎಣಿಕೆ

ಮಧ್ಯಾಹ್ನ 12: ಬಹುತೇಕ ಎಣಿಕೆ ಪೂರ್ಣ

ಸಂಜೆ 6: ಅಧಿಕೃತ ಫಲಿತಾಂಶ ಪ್ರಕಟ

100 ಮೀ. ವ್ಯಾಪ್ತಿಯಲ್ಲಿ ವಿಜಯೋತ್ಸವಕ್ಕೆ ನಿಷೇಧ

ಬುಧವಾರ ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಜತೆ ನಗರ ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುನಾಥ್‌ ಪ್ರಸಾದ್‌ ಮತ ಎಣಿಕೆ ನಡೆಯುವ ಮೌಂಟ್‌ ಕಾರ್ಮೆಲ್‌ ಮಹಿಳಾ ಪಿ.ಯು. ಕಾಲೇಜು, ಸೇಂಟ್‌ ಜೋಸೆಫ್‌ ಇಂಡಿಯನ್‌ ಹೈಸ್ಕೂಲ್‌ ಹಾಗೂ ಎಸ್‌ಎಸ್‌ಎಂಆರ್‌ವಿ ಪಿ.ಯು. ಕಾಲೇಜಿಗೆ ಭೇಟಿ ನೀಡಿ ಸಿದ್ಧತೆ ಮತ್ತು ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ ಎಣಿಕೆ ಕೇಂದ್ರಗಳ ಸುತ್ತಲು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಕೇಂದ್ರಗಳ 100 ಮೀಟರ್‌ ಅಂತರದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದು, 100 ಮೀಟರ್‌ ವ್ಯಾಪ್ತಿಯಲ್ಲಿ ವಿಜಯೋತ್ಸವ ಆಚರಣೆ ಮಾಡುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು.

ಮೂರು ಮತ ಎಣಿಕೆ ಕೇಂದ್ರಗಳ ಬಳಿ ಅಗ್ನಿ ಶಾಮಕ ದಳ, ಎರಡು ಆ್ಯಂಬುಲೆಸ್ಸ್‌ ವ್ಯವಸ್ಥೆ ಮಾಡಲಾಗಿದೆ. ಜತೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ಪರ್ಯಾಯವಾಗಿ ಮೂರು ಕೇಂದ್ರಗಳಲ್ಲಿ ತಲಾ ಎರಡು ಜನರೇಟರ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಸುತ್ತಿನ ಮತ ಎಣಿಕೆಯ ವಿವರಗಳನ್ನು ಧ್ವನಿವರ್ಧಕಗಳ ಮೂಲಕ ಕಾಲಕಾಲಕ್ಕೆ ಚುನಾವಣಾ ಸಿಬ್ಬಂದಿ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.