ಭೋಪಾಲ್‌[ಮೇ.09]: ಚುನಾವಣೆಯಲ್ಲಿ ಹಿಂದೂ ಕಾರ್ಡ್‌ ಬಳಸುತ್ತಿದೆ ಎಂದು ಬಿಜೆಪಿಯನ್ನು ಬಹುವಾಗಿ ಟೀಕಿಸಿರುವ ಹಿರಿಯ ಕಾಂಗ್ರೆಸ್ಸಿಗ ದಿಗ್ವಿಜಯ್‌ ಸಿಂಗ್‌, ಬುಧವಾರ ಇಲ್ಲಿ ನಡೆಸಿದ ತಮ್ಮ ರೋಡ್‌ ಅನ್ನು ಪೂರ್ಣ ಕೇಸರಿಮಯಗೊಳಿಸಿದ್ದರು. ರೋಡ್‌ ಶೋದಲ್ಲಿ ಕಾಂಗ್ರೆಸ್‌ ಬಾವುಟದ ಜೊತೆಗೆ ಕೇಸರಿ ಬಾವುಟಗಳು ಕೂಡಾ ರಾರಾಜಿಸಿದವು.

ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ, ಆದರೆ ಈ ಬಾರಿ ಟಿಕೆಟ್‌ ಸಿಗದ ಕಾರಣ ಕಾಂಗ್ರೆಸ್‌ ಪಾಳಯಕ್ಕೆ ಜಿಗಿದಿರುವ ನಾಮ್‌ದೇವ ತ್ಯಾಗಿ ಅಲಿಯಾಸ್‌ ಕಂಪ್ಯೂಟರ್‌ ಬಾಬಾ ನೇತೃತ್ವದಲ್ಲಿ ನೂರಾರು ಸಾಧು ಸಂತರು ರೋಡ್‌ಶೋದಲ್ಲಿ ಭಾಗಿಯಾಗಿದ್ದು ಮಾತ್ರವಲ್ಲದೇ, ಜೈಶ್ರೀರಾಮ್‌ ಘೋಷಣೆ ಕೂಗುವ ಮೂಲಕ ಇದು ಬಿಜೆಪಿ ರೋಡ್‌ ಶೋ ಇರಬಹುದೇ ಎಂದು ಅನುಮಾನ ಹುಟ್ಟುವಷ್ಟರ ಮಟ್ಟಿಗೆ ಕಾರ್ಯಕ್ರಮವನ್ನು ಕೇಸರಿಮಯಗೊಳಿಸಿದ್ದರು

ಇನ್ನು ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಲು ನಿಯೋಜನೆಗೊಂಡಿದ್ದ ಮಹಿಳಾ ಪೊಲೀಸರು ಕೂಡಾ ಕೇಸರಿ ಶಾಲ್‌ ತೊಟ್ಟಿದ್ದು ಭಾರೀ ವಿವಾದಕ್ಕೆ ಕಾರಣವಾಯ್ತು. ಈ ಬಗ್ಗೆ ಪತ್ರಕರ್ತರು ಪ್ರಶ್ನಿಸಿದ ವೇಳೆಗೆ, ತಮಗೆ ಹೀಗೇ ಬರುವಂತೆ ಸೂಚಿಸಲಾಗಿತ್ತು ಎಂದು ಹೇಳಿದ್ದಾರೆ. ಆದರೆ ದಿಗ್ವಿಜಯ್‌ ಮಾತ್ರ ಅವರು ತಮ್ಮ ಗುಂಪಿಗೆ ಸೇರಿದವರಲ್ಲ ಎಂದು ಹೇಳಿಕೊಂಡಿದ್ದಾರೆ.