ಬಲಿಯಾ(ಮೇ.15): ‘‘ದೇಶದ ಯಾವುದೇ ಪ್ರದೇಶದಲ್ಲಿ ಅಕ್ರಮ ಆಸ್ತಿ ಹೊಂದಿದ್ದರೆ ಅದನ್ನು ತೋರಿಸಿ ನೊಡೋಣ. ಯಾವುದೇ ವಿದೇಶ ಬ್ಯಾಂಕ್‌ನಲ್ಲಿ ಹಣ ಠೇವಣಿ ಮಾಡಿದ್ದರೆ ಆರೋಪಿಸಿದಂತೆ ಧೈರ್ಯ ವಿದ್ದರೆ ಸಾಬೀತು ಪಡಿಸಿ. ನಿಮಗಿದು ನನ್ನ ಬಹಿರಂಗ ಸವಾಲು’’

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉತ್ತರಪ್ರದೇಶದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ತಮ್ಮ ಮೇಲೆ ಆರೋಪ ಮಾಡುತ್ತಿರುವ ವಿಪಕ್ಷ ನಾಯಕರಿಗೆ ಬಹಿರಂಗವಾಗಿಯೇ ಸವಾಲು ಹಾಕಿದರು. ‘ಮಹಾಕಲಬೆರಕೆ’ ನಾಯಕರಿಗೆ ಇದು ನೇರ ಸವಾಲು ಎಂದ ಪ್ರಧಾನಿ ಮೋದಿ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು.

ದೇಶ ಅಥವಾ ವಿದೇಶದಲ್ಲಿ ನಾನು ಲಕ್ಷ, ಕೋಟಿ ಮೌಲ್ಯದ ಯಾವುದೇ ಅಕ್ರಮ ಆಸ್ತಿ ಮಾಡಿದ್ದರೆ ತೋರಿಸಿ. ಎಲ್ಲಾದರೂ ಫಾಮ್‌ರ್‍ ಹೌಸ್‌, ಬಂಗಲೆ ಅಥವಾ ವಾಣಿಜ್ಯ ಮಳಿಗೆ ಹೊಂದಿದ್ದೀನಾ? ವಿದೇಶಗಳ ಯಾವುದೇ ಬ್ಯಾಂಕ್‌ನಲ್ಲಿ ಅಕ್ರಮವಾಗಿ ಹಣ ಕೂಡಿಟ್ಟಿದ್ದೀನಾ? ಲಕ್ಷ, ಕೋಟಿ ಬೆಲೆಬಾಳುವ ವಾಹನಗಳನ್ನೇನಾದರೂ ಹೊಂದಿದ್ದೇನಾ ಎಂದು ಟೀಕಾಕಾರ ಮೇಲೆ ಕಿಡಿಕಾರಿದ ಮೋದಿ ಧೈರ್ಯವಿದ್ದರೆ ನಿಮ್ಮ ಆರೋಪಗಳನ್ನು ಸಾಬೀತುಪಡಿಸಿ ಎಂದು ಸವಾಲೆಸೆದರು.