ನವದೆಹಲಿ[ಮೇ.09]: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಈ ಹಿಂದೆ ‘ಶಹಜಾದ’ ಎಂದು ಕರೆಯುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ರಾಹುಲ್‌ ಭಾವ, ಪ್ರಿಯಾಂಕಾ ವಾದ್ರಾ ಪತಿ ರಾಬರ್ಟ್‌ ವಾದ್ರಾ ಅವರನ್ನು ‘ಶಹೆನ್‌ ಶಾ’ ಎಂದು ಸಂಬೋಧಿಸಿ ಕುಟುಕಿದ್ದಾರೆ.

ಹರಾರ‍ಯಣದ ಫತೇಹಾಬಾದ್‌ನಲ್ಲಿ ಬುಧವಾರ ಚುನಾವಣಾ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಅವರು, ‘ರೈತರನ್ನು ಲೂಟಿ ಹೊಡೆದ ವ್ಯಕ್ತಿಯನ್ನು ಚೌಕಿದಾರ ಕೋರ್ಟಿಗೆ ಕರೆದೊಯ್ದಿದ್ದಾನೆ. ಈಗ ಆತ ಜಾರಿ ನಿರ್ದೇಶನಾಲಯ ಹಾಗೂ ಜಾಮೀನಿಗಾಗಿ ಕೋರ್ಟುಗಳಿಗೆ ಅಲೆಯುತ್ತಿದ್ದಾನೆ. ಆತ ತನ್ನನ್ನು ತಾನು ಶಹೆನ್‌ ಶಾ ಎಂದು ಭಾವಿಸಿದ್ದ. ಈಗ ಹೆದರಿದ್ದಾನೆ. ಆತನನ್ನು ಈಗಾಗಲೇ ಜೈಲಿನ ಬಾಗಿಲಿನಲ್ಲಿ ನಿಲ್ಲಿಸಿದ್ದೇನೆ. ಆಶೀರ್ವದಿಸಿ, ಇನ್ನು ಮುಂದಿನ 5 ವರ್ಷಗಳಲ್ಲಿ ಆತನನ್ನು ಜೈಲಿಗೆ ಕಳುಹಿಸುತ್ತೇನೆ’ ಎಂದು ಹೇಳಿದರು.

ಭೂಪಿಂದರ್‌ ಸಿಂಗ್‌ ಹೂಡಾ ಅವರು ಹರಾರ‍ಯಣ ಮುಖ್ಯಮಂತ್ರಿಯಾಗಿದ್ದಾಗ ಗುಡಗಾಂವ್‌ನಲ್ಲಿ ನಡೆದ ಭೂ ವ್ಯವಹಾರಗಳಿಂದ ರಾಬರ್ಟ್‌ ವಾದ್ರಾ ಲಾಭ ಮಾಡಿಕೊಂಡಿದ್ದಾರೆ ಎಂಬ ದೂರುಗಳು ಬಂದಿದ್ದವು. ಹರಾರ‍ಯಣದ ಬಿಜೆಪಿ ಸರ್ಕಾರ ಏಕ ಸದಸ್ಯ ವಿಚಾರಣಾ ಆಯೋಗವನ್ನು 2015ರಲ್ಲಿ ರಚನೆ ಮಾಡಿತ್ತು. 182 ಪುಟಗಳ ವರದಿಯನ್ನು ಆಯೋಗ ಸಲ್ಲಿಸಿದೆಯಾದರೂ, ಅದನ್ನು ಬಹಿರಂಗಪಡಿಸುವುದಕ್ಕೆ ಪಂಜಾಬ್‌- ಹರಾರ‍ಯಣ ಹೈಕೋರ್ಟ್‌ ತಡೆ ನೀಡಿದೆ. ಇದಲ್ಲದೇ, ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಜಾರಿ ನಿರ್ದೇಶನಾಲಯ ಕೂಡ ವಾದ್ರಾ ವಿರುದ್ಧ ತನಿಖೆ ನಡೆಸುತ್ತಿದೆ.