ಮಹಾರಾಷ್ಟ್ರದ ಲಾತೂರ್ ನಲ್ಲಿ ಪ್ರಧಾನಿ ಮೋದಿ ಅಬ್ಬರದ ಭಾಷಣ| ದೇಶದ ಭದ್ರತೆ ದೃಷ್ಟಿಯಿಂದ ಕಾಂಗ್ರೆಸ್ ನಿರ್ನಾಮ ಅನಿವಾರ್ಯ ಎಂದ ಮೋದಿ| ಕಾಂಗ್ರೆಸ್ ಪಾಕಿಸ್ತಾನ ಪರ ನೀತಿ ಅನುಸರಿಸುತ್ತಿದೆ ಎಂದ ಪ್ರಧಾನಿ| ‘ಕಾಂಗ್ರೆಸ್‌ನಿಂದ ದೇಶದ ಅಖಂಡತೆ ಉಳಿಯುವುದು ಅನುಮಾನ’| ‘ಭಯೋತ್ಪಾದಕರನ್ನು ಅವರ ಮನೆಗೇ ನುಗ್ಗಿ ಹೊಡೆಯುವುದು ನವಭಾರತದ ನೀತಿ’|
ಲಾತೂರ್(ಏ.09): ಪಾಕಿಸ್ತಾನ ಏನು ಯೋಚನೆ ಮಾಡುತ್ತದೆಯೋ ಅದನ್ನೇ ಕಾಂಗ್ರೆಸ್ ತನ್ನ ಬಾಯಿಂದ ಹೇಳುತ್ತಿದೆ. ಕಾಂಗ್ರೆಸ್ ನ ಈ ಪಾಕ್ ಪರ ನಿಲುವು ದೇಶವನ್ನು ಅಪಾಯಕ್ಕೆ ದೂಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯದ ಧಾಟಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರದ ಲಾತೂರ್‌ನಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶ ಭಯೋತ್ಪಾದಕರ ಅಪಾಯ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಪಾಕ್ ಧ್ವನಿ ಮೊಳಗಿಸುತ್ತಿರುವ ಕಾಂಗ್ರೆಸ್ ನೀತಿ ದೇಶಕ್ಕೆ ಅಪಾಯಕಾರಿ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ, ರಾಷ್ಟ್ರಪತಿ ಬೇಕು ಎಂದು ಕೆಲವರು ಬೊಬ್ಬೆ ಇಡುತ್ತಿದ್ದಾರೆ. ಇಂತವರಿಂದ ದೇಶದ ಅಖಂಡತೆ ಉಳಿಯುವುದು ಅನುಮಾನ ಎಂದ ಮೋದಿ, ದೇಶ ಒಂದಾಗಿ ಉಳಿಯಲು ಬಿಜೆಪಿಯನ್ನು ಬೆಂಬಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಭಯೋತ್ಪಾದಕರನ್ನು ಅವರ ಮನೆಗೇ ನುಗ್ಗಿ ಹೊಡೆಯುವುದು ನವಭಾರತದ ನೀತಿಯಾಗಿದ್ದು, ತನ್ನ ಮೇಲೆ ದಾಳಿಯಾದಾಗಲೂ ಕೈಲಾಗದವರಂತೆ ಸುಮ್ಮನೆ ಕುಳಿತುಕೊಳ್ಳುವ ಭಾರತದ ದಿನಗಳು ದೂರಾಗಿವೆ ಎಂದು ಮೋದಿ ಮಾರ್ಮಿಕವಾಗಿ ನುಡಿದರು.
