ನವದೆಹಲಿ(ಮಾ.16): ಭ್ರಷ್ಟಾಚಾರ ವಿರುದ್ಧ ಧ್ವನಿ ಎತ್ತುವ ಪ್ರತಿಯೊಬ್ಬರೂ ಈ ದೇಶದ ಚೌಕಿದಾರ(ಕಾವಲುಗಾರ)ರಾಗಿದ್ದು, ಅನ್ಯಾಯದ ವಿರುದ್ಧ ಹೋರಾಟ ಮಾಡುವುದರಲ್ಲಿ ತಾವು ಏಕಾಂಗಿಯಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನವದೆಹಲಿಯಲ್ಲಿ #MainBhiChowkidar ಅಭಿಯಾನ ಉದ್ಘಾಟಿಸಿ ಮಾತನಾಡಿದ ಮೋದಿ, ನಿಮ್ಮ ಚೌಕಿದಾರ ದೃಢವಾಗಿ ನಿಂತಿದ್ದು ನೀವೂ ಕೂಡ ಚೌಕಿದಾರರಾಗಿ ದೇಶಸೇವೆ ಮಾಡಬೇಕು ಎಂದು ಬೆಂಬಲಿಗರಲ್ಲಿ ಮನವಿ ಮಾಡಿದರು.

ಸಮಾಜದಲ್ಲಿ ಭ್ರಷ್ಟಾಚಾರ, ಕೆಟ್ಟ ಶಕ್ತಿಗಳು, ಕೆಡುಕು, ಅನ್ಯಾಯಗಳ ವಿರುದ್ಧ ಹೋರಾಡುವ ಪ್ರತಿಯೊಬ್ಬರೂ ಚೌಕಿದಾರರು ಎಂದಿರುವ ಪ್ರಧಾನಿ, ಇಂದು ಪ್ರತಿಯೊಬ್ಬ ಭಾರತೀಯ ಕೂಡ ನಾನು ಕೂಡ ಚೌಕಿದಾರ ಎಂದು ಹೇಳಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.

ತಮ್ಮ ಸಂದೇಶವನ್ನು ಹೊತ್ತ ಸುಮಾರು 3 ನಿಮಿಷದ ವಿಡಿಯೊವನ್ನು ಕೂಡ ಪ್ರಧಾನಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದೇ ಏಪ್ರಿಲ್ 11ರಿಂದ ಒಟ್ಟು 7 ಹಂತಗಳಲ್ಲಿ ಲೋಕಸಭೆಗೆ ದೇಶಾದ್ಯಂತ ಚುನಾವಣೆ ನಡೆಯಲಿದ್ದು, ಕರ್ನಾಟಕದಲ್ಲಿ ಏಪ್ರಿಲ್ 18 ಮತ್ತು ಏಪ್ರಿಲ್ 23ರಂದು ಒಟ್ಟು ಎರಡು ಹಂತಗಳಲ್ಲಿ ಚುನಾವಣೆ ಘೋಷಣೆಯಾಗಿದೆ. ಮೇ 23 ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟಣೆಯಾಗಲಿದೆ.