ಮುಂಬೈ(ಮಾ.29): ಲೋಕಸಭೆ ಚುನಾವಣೆಗೆ ಇನ್ನೇನು ಕ್ಷಣಗಣನೆ ಶುರುವಾಗಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ, ಪತ್ರಕರ್ತ ಮತ್ತು ರಿಪಬ್ಲಿಕ್ ಮಿಡಿಯಾ ನೆಟವರ್ಕ್ಸ್ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಸಂದರ್ಶನ ನೀಡಿದ್ದಾರೆ.

2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಟಿವಿ ಸಂದರ್ಶನ ಇದಾಗಿದ್ದು, ಕಳೆದ ಐದು ವರ್ಷದಲ್ಲಿ ಭಾರತ ನಡೆದು ಬಂದ ದಾರಿ ಮತ್ತು ಲೋಕಸಭಾ ಚುನಾವಣೆಯ ಕುರಿತು ಮೋದಿ ಮನಬಿಚ್ಚಿ ಮಾತನಾಡಿದ್ದಾರೆ.

ಸಂದರ್ಶನದಲ್ಲಿ ದೇಶದ ಜನತೆ 2019ರಲ್ಲಿ ಸದೃಢ ಮತ್ತ ಸಕ್ಷಮ ಸರ್ಕಾರದ ನಿರೀಕ್ಷೆಯಲ್ಲಿದ್ದು, ಜನತೆಯ ಆಶಯದಂತೆ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

2014ರಲ್ಲಿ ಅಧಿಕಾರ ಸ್ವೀಕರಿಸಿದ ದಿನದಿಂದ ಇಲ್ಲಿಯವರೆಗೂ ಭಾರತ ನಡೆದು ಬಂದ ದಾರಿಯನ್ನು ವಿವರಿಸಿದ ಪ್ರಧಾನಿ, ಭಾರತದ ಕುರಿತು ವಿಶ್ವದ ಚಿಂತನೆ ಬದಲಾಗಿರುವುದು ತಮ್ಮ ಆಡಳಿತದ ಮಹತ್ವದ ಸಾಧನೆ ಎಂದು ಹೇಳಿದ್ದಾರೆ.

ಭ್ರಷ್ಟಾಚಾರ ಸಹಿಸದ, ಭಯೋತ್ಪಾದನೆ ಕುರಿತು ಶೂನ್ಯ ಸಹಿಷ್ಣುತೆ ಹೊಂದಿರುವ ಮತ್ತು ಸದೃಢ ಆರ್ಥಿಕತೆಯ ಬಲಿಷ್ಠ ಭಾರತದ ನಿರ್ಮಾಣ ಕಾರ್ಯ ಶುರುವಾಗಿದೆ ಎಂದು ಮೋದಿ ಸಂದರ್ಶನದಲ್ಲಿ ಹೇಳಿದ್ದಾರೆ.

ಅಂತೆಯೇ ಪುಲ್ವಾಮಾ ಆತ್ಮಹತ್ಯಾ ದಾಳಿ, ಬಾಲಾಕೊಟ್ ವಾಯುದಾಳಿಯ ಕುರಿತೂ ಮಾತನಾಡಿರುವ ಪ್ರಧಾನಿ, ಭಾರತವನ್ನು ದುರ್ಬಲಗೊಳಿಸುವ ಶತ್ರು ರಾಷ್ಟ್ರದ ಯಾವುದೇ ಹುನ್ನಾರವನ್ನು ತಡೆಯುವಲ್ಲಿ ಭಾರತ ಸಿದ್ಧವಾಗಿದೆ ಎಂದು ಗುಡುಗಿದರು.

ಇದೇ ವೇಳೆ ಪ್ರತಿಪಕ್ಷಗಳ ಮೇಲೆ ಹರಿಹಾಯ್ದಿರುವ ಪ್ರಧಾನಿ, ದೇಶ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾಗಲೂ ವಾಯುದಾಳಿಯ ಸಾಕ್ಷಿ ಕೇಳುವ ಮೂಲಕ ನಮ್ಮ ಸೈಬಿಕರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಕೆಲಸಕ್ಕೆ ಕೈ ಹಾಕಿವೆ ಎಂದು ಕಿಡಿಕಾರಿದರು.