ಛತ್ತೀಸ್‌ಗಢ[ಏ.17]: ‘ಎಲ್ಲ ಮೋದಿಗಳೂ ಕಳ್ಳರೇಕೆ?’ ಎಂಬ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ‘ಅವಹೇಳನಕಾರಿಯಾಗಿ ಮಾತನಾಡುವುದು ‘ವಂಶಸ್ಥ’ನಿಗೆ ಫ್ಯಾಷನ್‌ ಆಗಿಬಿಟ್ಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಮೋಸ ಮಾಡುವಲ್ಲಿ ಕಾಂಗ್ರೆಸ್‌ ಪಿಎಚ್‌ಡಿ ಮಾಡಿದೆ ಎಂದು ಟೀಕಿಸಿದ್ದಾರೆ.

ಮಂಗಳವಾರ ಛತ್ತೀಸ್‌ಗಢದ ಕೋರ್ಬಾದಲ್ಲಿ ಬಿಜೆಪಿ ಲೋಕಸಭಾ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, ‘ನಾಮದಾರ್‌ಗೆ (ವಂಶಸ್ಥನಿಗೆ) ಅವಹೇಳನಕಾರಿ ಪದಬಳಕೆ ಮಾಡುವುದು ಅಭ್ಯಾಸವಾಗಿ ಹೋಗಿದೆ. ಇದು ಮಾತನಾಡುವ ಭಾಷೆಯೇ? ಇಂತಹ ವ್ಯಕ್ತಿಗಳನ್ನು ಜನರು ಕಿತ್ತೆಸೆಯಬೇಕು. ಕೀಳಾಗಿ ಮಾತನಾಡುವುದು ಇವರಿಗೆ ಫ್ಯಾಷನ್‌ ಆಗಿದೆ. ಛತ್ತೀಸ್‌ಗಢದಲ್ಲಿನ ಸಾಹು ಸಮುದಾಯಕ್ಕೇ ಗುಜರಾತ್‌ನಲ್ಲಿ ಮೋದಿ ಸಮುದಾಯ ಎಂದು ಕರೆಯಲಾಗುತ್ತದೆ. ಹಾಗೆಂದರೆ ಅವರೆಲ್ಲರೂ ಕಳ್ಳರೇ?’ ಎಂದು ಪ್ರಶ್ನಿಸಿದರು. ಮೋದಿ ಮತ್ತು ಸಾಹು ಸಮುದಾಯದವರು ವ್ಯಾಪಾರ ವೃತ್ತಿ ನಡೆಸುವ ಸಮುದಾಯವಾಗಿದೆ.

ಇದೇ ವೇಳೆ ಇತ್ತೀಚೆಗೆ ನಕ್ಸಲೀಯ ದಾಳಿಯಲ್ಲಿ ಛತ್ತೀಸ್‌ಗಢದ ಬಿಜೆಪಿ ಶಾಸಕ ಭೀಮಾ ಮಾಂಡವಿ ಅವರು ಹತ್ಯೆಗೀಡಾದ ಘಟನೆಯನ್ನು ಪ್ರಸ್ತಾಪಿಸಿ ಕಾಂಗ್ರೆಸ್‌ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ, ‘ಕಾಂಗ್ರೆಸ್‌ ಪಕ್ಷವು ನಕ್ಸಲೀಯರೊಂದಿಗೆ ಶಾಮೀಲಾಗಿರುವ ಕಾರಣ ಇಂತಹ ಘಟನೆಗಳು ನಡೆಯುತ್ತಿವೆ. ಮಾವೋವಾದಿಗಳನ್ನು ಕಾಂಗ್ರೆಸ್‌ ಉತ್ತೇಜಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹಿಂಸೆ ಹಾಗೂ ಭಯೋತ್ಪಾದನೆಯ ಹರಿಕಾರರು ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಘೋಷಣೆ ಆದ ನಂತರ ಕುಣಿದು ಕುಪ್ಪಳಿಸುತ್ತಿದ್ದಾರೆ. ಹೀಗಾಗಿ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ರಾಜಿಯಾಗಲು ಕಾಂಗ್ರೆಸ್‌ ಪಕ್ಷಕ್ಕೆ ನಾವು ಬಿಡುವುದಿಲ್ಲ’ ಎಂದು ಮೋದಿ ಹೇಳಿದರು. ದೇಶದ್ರೋಹ ಕಾಯ್ದೆ ಹಾಗೂ ಮಾನಹಾನಿ ಕಾಯ್ದೆಯನ್ನು ರದ್ದುಗೊಳಿಸುವ ಮತ್ತು ಸೇನೆಯ ವಿಶೇಷಾಧಿಕಾರ ತೆಗೆದುಹಾಕುವ ಅಂಶಗಳು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿದ್ದವು. ಈ ಹಿನ್ನೆಲೆಯಲ್ಲಿ ಮೋದಿ ಈ ಮಾತುಗಳನ್ನಾಡಿದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.