ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಕ್ತಾಯ |  ಇಂದು ನಾಮಪತ್ರ ಪರಿಶೀಲನೆ, ಹಿಂಪಡೆಯಲು ನಾಡಿದ್ದು ಕಡೆಯ ದಿನ |  ಮೊದಲ ಹಂತದಲ್ಲಿ 20 ರಾಜ್ಯ, 1 ಕೇಂದ್ರಾಡಳಿತ ಪ್ರದೇಶದ 91 ಸ್ಥಾನಕ್ಕೆ ಚುನಾವಣೆ

ನವದೆಹಲಿ (ಮಾ. 26):  2019ರ ಲೋಕಸಭಾ ಚುನಾವಣೆಯ ಪೈಕಿ ಏ.11ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅವಧಿ ಸೋಮವಾರಕ್ಕೆ ಮುಕ್ತಾಯವಾಗಿದೆ. ಲೋಕಸಭೆ ಪ್ರವೇಶ ಬಯಸಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ಮಂಗಳವಾರ ನಡೆಯಲಿದೆ.

ಚುನಾವಣಾ ಕಣದಿಂದ ಹಿಂದೆ ಸರಿಯಬೇಕೆಂಬ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಮಾ.28ರ ಒಳಗಾಗಿ ವಾಪಸ್‌ ಪಡೆಯಬಹುದಾಗಿದೆ.

ಆಂಧ್ರಪ್ರದೇಶದ 25, ಅರುಣಾಚಲ ಪ್ರದೇಶದ 2, ಅಸ್ಸಾಂನ 5, ಬಿಹಾರದ 4, ಛತ್ತೀಸ್‌ಗಢದ 1, ಜಮ್ಮು-ಕಾಶ್ಮೀರದ 2, ಮಹಾರಾಷ್ಟ್ರದ 7, ಮಣಿಪುರದ 1, ಮೇಘಾಲಯದ 2, ಮಿಜೋರಾಂನ 1, ನಾಗಾಲ್ಯಾಂಡ್‌ನ 1, ಒಡಿಶಾದ 4, ಸಿಕ್ಕಿಂನ 1, ತೆಲಂಗಾಣದ 17, ತ್ರಿಪುರಾದ 1, ಉತ್ತರ ಪ್ರದೇಶದ 8, ಉತ್ತರಾಖಂಡ್‌ನ 5, ಪಶ್ಚಿಮ ಬಂಗಾಳದ 2, ಅಂಡಮಾನ್‌ ನಿಕೋಬಾರ್‌ನ 1, ಲಕ್ಷದ್ವೀಪದ 1 ಕ್ಷೇತ್ರ ಸೇರಿದಂತೆ ಒಟ್ಟಾರೆ 91 ಲೋಕಸಭಾ ಕ್ಷೇತ್ರಗಳಲ್ಲಿ ಏ.11ರಂದು ನಡೆಯಲಿದೆ. ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.