ನವದೆಹಲಿ[ಏ.24]: ಇಷ್ಟುದಿನಗಳ ಕಾಲ ಆಡಳಿತಾರೂಢ ಸರ್ಕಾರ ವಿದ್ಯುನ್ಮಾನ ಮತಯಂತ್ರವನ್ನು ತಮ್ಮ ಪರವಾಗಿ ತಿರುಚಿಕೊಳ್ಳುತ್ತವೆ ಎಂದು ಆರೋಪಿಸುತ್ತಾ ಬಂದಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು, ಇದೀಗ ಭಾರತದ ಮತಯಂತ್ರಗಳನ್ನು ರಷ್ಯಾ ತಿರುಚುತ್ತವೆ ಎಂದು ಹೊಸ ಬಾಂಬ್‌ ಸಿಡಿಸಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ಅವರನ್ನು ಅಮೆರಿಕ ಅಧ್ಯಕ್ಷರನ್ನಾಗಿ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿದೆ ಎಂಬ ಆರೋಪಗಳ ಬೆನ್ನಲ್ಲೇ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರ ಹೇಳಿಕೆ ಸಂಚಲನ ಮೂಡಿಸಿದೆ.

ಈ ಬಗ್ಗೆ ಮಂಗಳವಾರ ಟಿಡಿಪಿ, ಎನ್‌ಸಿಪಿ, ಸಿಪಿಐ, ಆಪ್‌, ಡಿಎಂಕೆ ಸೇರಿದಂತೆ ಇತರ ವಿಪಕ್ಷಗಳ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು ಅವರು, ‘ರಿಮೋಟ್‌ ಮೂಲಕ ಇವಿಎಂಗಳನ್ನು ನಿಯಂತ್ರಿಸಬಹುದು. ಅಲ್ಲದೆ, ರಷ್ಯಾದಲ್ಲಿ ಕುಳಿತವರು ಭಾರತದ ಇವಿಎಂಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ ಎಂಬ ಗಾಳಿಸುದ್ದಿಗಳು ಹರಿದಾಡುತ್ತಿವೆ,’ ಎಂದು ಆರೋಪಿಸಿದರು.