ನವದೆಹಲಿ(ಏ.14): 2019ರ ಲೋಕಸಭೆ ಚುನಾವಣೆಗೆ ಮೊದಲನೇ ಹಂತದ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೇ, ವಿಪಕ್ಷಗಳು ಚುನಾವಣಾ ಆಯೋಗದ ಮೇಲೆ ಮುಗಿದು ಬಿದ್ದಿವೆ. ಇವಿಎಂ ಮತಯಂತ್ರದಲ್ಲಿ ದೋಷವಿದ್ದು, ಬ್ಯಾಲೆಟ್ ಪೇಪರ್ ಪದ್ದತಿಯನ್ನು ಮರುಜಾರಿಗೊಳಿಸುವಂತೆ ಒತ್ತಾಯಿಸಿವೆ.

ನವದೆಹಲಿಯಲ್ಲಿ ಇಂದು 20ಕ್ಕೂ ಅಧಿಕ ರಾಜಕೀಯ ಪಕ್ಷಗಳು ಸಭೆ ನಡೆಸಿದ್ದು, ಚುನಾವಣೆ ಬಳಿಕ ಶೇ.50ಕ್ಕೂ ಅಧಿಕ ಇವಿಎಂ ಮತ್ತು ವಿವಿಪ್ಯಾಟ್ ಗಳನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿವೆ.

ಇವಿಎಂ ಬಳಸುತ್ತಿದ್ದ ಹಲವು ದೇಶಗಳು ಅದರ ದುರ್ಬಳಕೆ ಅರಿತು ಈಗಾಗಲೇ ಮರಳಿ ಬ್ಯಾಲೆಟ್ ಪೇಪರ್‌ನ್ನು ಅಪ್ಪಿಕೊಂಡಿವೆ ಎಂದು ವಿಪಕಷಗಳು ತಮ್ಮ ವಾದಕ್ಕೆ ಸಮರ್ಥನೆ ನೀಡಿವೆ.

2005-09ರಲ್ಲಿ ಇವಿಎಂ ಯಂತ್ರ ಬಳಸುತ್ತಿದ್ದ ಜರ್ಮನಿ ಇದೀಗ ಮರಳಿ ಬ್ಯಾಲೆಟ್ ಪೇಪರ್ ಪದ್ದತಿ ಅಳವಡಿಸಿಕೊಂಡಿದ್ದು, ಇವಿಎಂ ದುರ್ಬಳಕೆ ಕುರಿತು ವಿಶ್ವದ ಎಲ್ಲಾ ರಾಷ್ಟ್ರಗಳೂ ಚಕಾರವೆತ್ತಿವೆ ಎಂದು ವಿಪಕ್ಷಗಳು ಹೇಳಿವೆ.

ಅದರಂತೆ ನೆದರ್ ಲ್ಯಾಂಡ್ ಕೂಡ 1990-2007ರವರೆಗೂ ಇವಿಎಂ ಬಳಸಿ ಮರಳಿ ಬ್ಯಾಲೆಟ್ ಪೇಪರ್ ಅನ್ನು ಅಪ್ಪಿಕೊಂಡಿದೆ. ಐರ್ಲ್ಯಾಂಡ್ 2002-04ರವೆಗೆ ಇವಿಎಂ ಬಳಿಸಿ ಮತ್ತೆ ಬ್ಯಾಲೆಟ್ ಪೇಪರ್ ಬಳಸುತ್ತಿದೆ ಎಂದು ವಿಪಕ್ಷಗಳು ಮಾಹಿತಿ ನೀಡಿವೆ.

ಮೊದಲ ಹಂತದ ಚುನಾವಣೆ ವೇಳೆ ಆಂಧ್ರದಲ್ಲಿ ಒಟ್ಟು 4,583 ಮತಯಂತ್ರಗಳು ಕೆಟ್ಟಿದ್ದು, ಮತದಾನ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿಲ್ಲ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಗಂಭೀರವ ಆರೋಪ ಮಾಡಿದ್ದಾರೆ.

ಒಟ್ಟಿನಲ್ಲಿ ಇವಿಎಂ ಮತಯಂತ್ರದ ಕುರಿತಾಗಿ ವಿಪಕ್ಷಗಳು ಒಟ್ಟಾಗಿ ಚುನಾವಣೆ ಆಯೋಗದ ಮೇಲೆ ಮುಗಿದು ಬಿದ್ದಿದ್ದು, ಲೋಕಸಭೆ ಚುನಾವಣೆ ವೇಳೆಯೇ ಇವಿಎಂ ನಿಷೇಧಿಸುವಂತೆ ಒತ್ತಾಯಿಸುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.