'ಮಂಡ್ಯದಲ್ಲಿ ಓರ್ವ ಹೆಣ್ಮಗಳು 8 MLA, CM, ಮಾಜಿ PM, 3 ಮಂತ್ರಿ ಸೇನೆ ಎದುರಿಸುತ್ತಿದ್ದಾರೆ'
ಮಂಡ್ಯ ಹೈ ವೋಲ್ಟೇಜ್ ಕ್ಷೇತ್ರ. ಒಬ್ಬ.ಹೆಣ್ಣು ಮಗಳು 8 ಜನ MLA, CM, ಮಾಜಿ ಪ್ರಧಾನಿ, ಮೂರು ಮಂತ್ರಿಗಳು ಇರುವ ಸೇನೆಯನ್ನು ಎದುರಿಸುತ್ತಿದ್ದಾರೆ ಎಂದು ಮಾಜಿ ಡಿಸಿಂ ಆರ್ . ಅಶೋಕ್ ಪರೋಕ್ಷವಾಗಿ ಜೆಡಿಎಸ್ ಗೆ ಟಾಂಗ್ ಕೊಟ್ಟಿದ್ದಾರೆ.
ಚಿತ್ರದುರ್ಗ, [ಮಾ.30]: ಮಂಡ್ಯದಲ್ಲಿ ಒಬ್ಬ ಹೆಣ್ಣು ಮಗಳು 8 ಜನ ಎಂಎಲ್ಎ, ಸಿಎಂ, ಮಾಜಿ ಪ್ರಧಾನಿ, ಮೂರು ಮಂತ್ರಿಗಳು ಇರುವ ಸೇನೆಯನ್ನು ಎದುರಿಸುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ಜೆಡಿಎಸ್ ಗೆ ಟಾಂಗ್ ಕೊಟ್ಟಿದ್ದಾರೆ.
ಚಿತ್ರದುರ್ಗದಲ್ಲಿ ಬಿಜೆಪಿ ಮುಖಂಡರ ಜೊತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿಖಿಲ್ ಇಷ್ಟು ದಿನ ಪಕ್ಷದ ಪೋಸ್ಟರ್, ಪೇಸ್ಟರ್ ಯಾವುದರಲ್ಲೂ ಇರಲಿಲ್ಲ. ಈಗ ಅತಿಥಿಯಾಗಿ ಬಂದಿದ್ದಾರೆ. ಮಂಡ್ಯ ಹೈ ವೋಲ್ಟೇಜ್ ಕ್ಷೇತ್ರವಾಗಿದ್ದು, ಸುಮಲತಾ ಕಂಡು ಅವರೆಲ್ಲಾ ಭಯ ಬಿದ್ದಿದ್ದಾರೆ. ಈ ಭಯದಿಂದಲೇ ಚುನಾವಣೆಗೆ ಅವರು ನಾಲ್ಕು ಜನ ಸುಮಲತಾ ಹೆಸರಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ ಎಂದು ಜೆಡಿಎಸ್ ವಿರುದ್ಧ ಕುಟುಕಿದರು.
ರಾಜ್ಯದಲ್ಲಿ ಜೆಡಿಎಸ್ 3G, ಕಾಂಗ್ರೆಸ್ 4G, ಈ ಪಕ್ಷಗಳಲ್ಲಿ ಮೂರು-ನಾಲ್ಕು ತಲೆಮಾರುಗಳ ರಾಜಕಾರಣ ನಡೆಯುತ್ತಿದೆ. ಅಧಿಕಾರ ಬೇಕಾಗಿರುವ ಲೀಡರ್ಗಳು ಮಾತ್ರ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯನ್ನು ಒಪ್ಪಿದ್ದಾರೆ. ಆದ್ರೆ ಕಾರ್ಯಕರ್ತರು ಎರಡೂ ಪಕ್ಷಗಳು ಒಟ್ಟಾಗಿ ಚುನಾವಣೆ ಮಾಡುವುದನ್ನು ವಿರೋಧಿಸುತ್ತಿದ್ದಾರೆ ಎಂದರು.
ರಾಜ್ಯಕ್ಕೆ ಮೋದಿ
ಏಪ್ರಿಲ್ 8 ರಂದು ಚಿತ್ರದುರ್ಗ ಹಾಗೂ ಮೈಸೂರಲ್ಲಿ ಮೋದಿ ರ್ಯಾಲಿ ನಡೆಯಲಿದೆ. ಇನ್ನು ಏಪ್ರಿಲ್ 10 ಮತ್ತು 12 ರಂದು ಕೂಡಾ ರಾಜ್ಯಕ್ಕೆ ಆಗಮಿಸಲಿದ್ದು, ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.