ಲಖನೌ[ಮೇ.04]: ‘ಚುನಾವಣಾ ಪ್ರಚಾರ ವೇದಿಕೆ ಇರುವುದು ಭಜನೆ ಮಾಡುವುದಕ್ಕಲ್ಲ. ವಿರೋಧಿಗಳ ಮೇಲೆ ದಾಳಿ ಮಾಡಿ, ಅವರನ್ನು ಅಖಾಡದಲ್ಲಿ ಮಣಿಸುವುದಕ್ಕೆ.’

ಹೀಗೆ ಹೇಳಿದ್ದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌. ಈ ಮೂಲಕ ತಮ್ಮ ಮೇಲೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾ ಆಯೋಗಕ್ಕೆ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರಲ್ಲದೇ, ತಮ್ಮನ್ನು ಟೀಕಿಸುವ ವಿರೋಧ ಪಕ್ಷದ ನಾಯಕರನ್ನೂ ಲೇವಡಿ ಮಾಡಿದ್ದಾರೆ. ಚುನಾವಣೆ ಪ್ರಚಾರ ವೇದಿಕೆ ಏರುವುದು ಭಜನೆ ಮಾಡಲಿಕ್ಕಾಗಿ ಎಂದುಕೊಂಡಿದ್ದೀರಾ? ವಿರೋಧಿಗಳನ್ನು ಸೋಲಿಸಬೇಕಾದರೆ ಅವರ ವಿರುದ್ಧ ಟೀಕೆಗಳನ್ನು ಮಾಡುವುದು, ಅವರನ್ನು ಛೇಡಿಸಿ ಮಾತನಾಡುವುದು ಪ್ರಚಾರದ ಒಂದು ಭಾಗ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡಿದ ಕಾರಣಕ್ಕಾಗಿ ಚುನಾವಣಾ ಆಯೋಗ ತಮ್ಮ ವಿರುದ್ಧ ಕೈಗೊಂಡಿದ್ದ ಕ್ರಮವನ್ನು ಪ್ರಸ್ತಾಪಿಸಿ ಅವರು ಹೀಗೆ ಹೇಳಿದ್ದಾರೆ.

ಜನರ ಎದುರು ವಿರೋಧಿಗಳ ಲೋಪವನ್ನು ಹೇಳುವುದರ ಜೊತೆಗೆ ನಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೇಳಿಕೊಳ್ಳಬೇಕಾಗುತ್ತದೆ. ಕಾಂಗ್ರೆಸ್‌ ಅಥವಾ ಸಮಾಜವಾದಿ ಪಕ್ಷವನ್ನು ಹೀಯಾಳಿಸಬಾರದು ಎಂಬುದನ್ನೆಲ್ಲ ತಲೆಯಲ್ಲಿಟ್ಟುಕೊಂಡು ಪ್ರಚಾರ ನಡೆಸಲು ಸಾಧ್ಯವಿಲ್ಲ. ಸವಾಲಿಗೆ ಪ್ರತಿಸವಾಲು, ಏಟಿಗೆ ಎದಿರೇಟು ನೀಡುವುದರಲ್ಲಿ ನಮ್ಮ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.