ಮಾಲೋಗಮ್‌[ಏ.19]: ಪ್ರಜಾಪ್ರಭುತ್ವದಲ್ಲಿ ಒಂದೇ ಒಂದು ಮತವೂ ಅತಿ ಮುಖ್ಯ. ಈ ಕಾರಣಕ್ಕಾಗಿ ಚುನಾವಣಾ ಅಧಿಕಾರಿಗಳ ತಂಡವೊಂದು ಅರುಣಾಚಲ ಪ್ರದೇಶದ ದುರ್ಗಮ ಹಳ್ಳಿಯೊಂದರಲ್ಲಿ ಒಂದೇ ಒಂದು ಮತಕ್ಕಾಗಿ ಮತಗಟ್ಟೆಯನ್ನು ಸ್ಥಾಪಿಸಿದೆ.

ಹೌದು. ಚೀನಾದ ಗಡಿಗೆ ಹೊಂದಿಕೊಂಡಿರುವ ದಟ್ಟಅರಣ್ಯದ ಮಧ್ಯೆ ಇರುವ ಮಾಲೋಗಮ್‌ ಎಂಬ ತಾಂಡದಲ್ಲಿ ಇರುವುದು ಒಂದೇ ಮತ. 2011ರ ಜನಗಣತಿಯ ಪ್ರಕಾರ ಈ ಹಳ್ಳಿಯಲ್ಲಿ ಐವರು ನಿವಾಸಿಗಳು ಇದ್ದರೂ, ಮತದಾನ ನೋಂದಣಿ ಮಾಡಿಕೊಂಡಿರುವುದು ಸೊಕೆಲಾ ತಯಾಂಗ್‌ ಎಂಬ ಮಹಿಳೆ.

ಯಾವ ಮತದಾರನೂ ಮತ ಚಲಾಯಿಸಲು 2 ಕಿ.ಮೀ.ಗಿಂತಲೂ ಹೆಚ್ಚು ದೂರ ಕ್ರಮಿಸಬಾರದು ಎಂಬ ನಿಯಮ ವಿರುವ ಕಾರಣಕ್ಕೆ ಮತಗಟ್ಟೆಅಧಿಕಾರಿ ಗಮ್ಮರ್‌ ಬಮ್‌ ಹಾಗೂ ಅವರ ತಂಡಕ್ಕೆ ಮಾಲೋಗಮ್‌ನಲ್ಲಿ ಮತಗಟ್ಟೆಸ್ಥಾಪಿಸುವ ಹೊಣೆ ವಹಿಸಲಾಗಿತ್ತು. ಈ ಕಾರ್ಯಕ್ಕಾಗಿ 6 ಮಂದಿ ಅಧಿಕಾರಿಗಳ ತಂಡ ನಾಲ್ಕು ದಿನದಲ್ಲಿ 483 ಕಿ.ಮೀ. ದೂರ ಕ್ರಮಿಸಿದೆ. ಏ.11ರಂದು ನಡೆದ ಮತದಾನಕ್ಕೆ ಎರಡು ದಿನ ಮನ್ನವೇ ಈ ಹಳ್ಳಿಗೆ ತರೆಳಲು ಚುನಾವಣಾ ಅಧಿಕಾರಿಗಳ ತಂಡ ಪ್ರಯಾಣ ಆರಂಭಿಸಿತ್ತು.

ಹವಾಯ್‌ ಜಿಲ್ಲೆಯವರೆಗೆ ಹೆಲಿಕಾಪ್ಟರ್‌ನಲ್ಲಿ ತೆರಳಿ, ಅಲ್ಲಿಂದ ಎರಡು ಜೊತೆ ಮತಯಂತ್ರಗಳನ್ನು ಹೊತ್ತು ಕಾಡಿನ ಮಧ್ಯೆ ಕಾಲ್ನಡಿಗೆಯಲ್ಲಿ ತೆರಳಿ, ಈ ಹಳ್ಳಿಯನ್ನು ನಿಗದಿತ ಸಮಯದ ಒಳಗಾಗಿ ತಲುಪಿದ್ದರು. ಏ.11ರ ಮುಂಜಾನೆ 7 ಗಂಟೆಗೆ ಮತಗಟ್ಟೆಯನ್ನು ತೆರದು ಮತಹಾಕಲಿರುವ ಒಬ್ಬಳೇ ಒಬ್ಬ ಮಹಿಳೆಗಾಗಿ ಕಾಯುತ್ತಿದ್ದರು. ಇವರ ನಿರೀಕ್ಷೆಯನ್ನು ಸೊಕೆಲಾ ತಯಾಂಗ್‌ ಹುಸಿಗೊಳಿಸಲಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು 200 ಕಿ.ಮೀ. ದೂರದ ಆಸ್ಪತ್ರೆಗೆ ದಾಖಲಿಸಿದ್ದ ಆಕೆ ಮತಹಾಕುವುದಕ್ಕೆಂದೇ ತನ್ನ ಹಳ್ಳಿಗೆ ಬಂದಿದ್ದಳು.

ಮುಂಜಾನೆ 8.30ಕ್ಕೆ ಮತಗಟ್ಟೆಗೆ ಬಂದು ತನ್ನ ಹಕ್ಕು ಚಲಾಯಿಸಿದ್ದಾಳೆ. ಚಲಾವಣೆ ಆಗಬೇಕಿದ್ದ ಒಂದೇ ಒಂದು ಮತ ಚಲಾವಣೆ ಆಗಿದ್ದರೂ ಸಂಜೆ 5 ಗಂಟೆಯ ವರೆಗೂ ಇದ್ದು, ಚುನಾವಣಾ ಪ್ರಕ್ರಿಯೆ ಮುಗಿಸಿ ಅಧಿಕಾರಿಗಳ ತಂಡ ಹಿಂದಿರುಗಿದೆ.

Close