ಭೋಪಾಲ್‌[ಏ.23]: 26/11ರ ಹೀರೋ ಹೇಮಂತ್‌ ಕರ್ಕರೆ ಬಗ್ಗೆ ವಿವಾದಾತ್ಮಕ ಹಾಗೂ 1992ರ ಬಾಬ್ರಿ ಮಸೀದಿ ಧ್ವಂಸದಲ್ಲಿ ತಾವೂ ಭಾಗಿಯಾಗಿದ್ದಾಗಿ ಸಮರ್ಥಿಸಿಕೊಳ್ಳುವ ಮೂಲಕ ಚುನಾವಣಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದ ಭೋಪಾಲ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಹುರಿಯಾಳು ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಅವರಿಗೆ ಬಿಜೆಪಿಯೂ ಎಚ್ಚರಿಕೆ ನೀಡಿದೆ.

ಇತ್ತೀಚೆಗಷ್ಟೇ ಸಾಧ್ವಿ ಪ್ರಜ್ಞಾರನ್ನು ಕಚೇರಿಗೆ ಕರೆಸಿಕೊಂಡ ಬಿಜೆಪಿ ನಾಯಕತ್ವ, ಸುಮಾರು ನಾಲ್ಕು ಗಂಟೆಗಳ ಕಾಲ ಬುದ್ಧಿಮಾತು ಹೇಳಿದೆ. ಅಲ್ಲದೆ, ಯಾವುದೇ ಕಾರಣಕ್ಕೂ ಪ್ರಚೋದಕಾರಿ ಹೇಳಿಕೆಗಳನ್ನು ನೀಡದಂತೆ ಸಾಧ್ವಿ ಪ್ರಜ್ಞಾರಿಗೆ ಬಿಜೆಪಿ ನಾಯಕರು ಸಲಹೆ ನೀಡಿದ್ದಾರೆ. ತಮ್ಮ ಪ್ರಚೋದನಕಾರಿ ಹೇಳಿಕೆಗಳ ಕಾರಣಕ್ಕೆ ಈಗಾಗಲೇ ಪ್ರಜ್ಞಾ ಅವರಿಗೆ ಚುನಾವಣೆ ಆಯೋಗವೂ ಈಗಾಗಲೇ ಎರಡು ನೋಟಿಸ್‌ಗಳನ್ನು ನೀಡಿದೆ.

ಸಾಧ್ವಿ ಹೇಳಿದ್ದೇನು?:

6 ಮಂದಿ ಬಲಿ ಪಡೆದ 2008ರ ಮಾಲೇಗಾಂವ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಬಂಧನವಾಗಿದ್ದಾಗ ತನಗೆ ಚಿತ್ರಹಿಂಸೆ ನೀಡಿದ್ದ ಆಗಿನ ಮಹಾರಾಷ್ಟ್ರ ಎಟಿಎಸ್‌ ಮುಖ್ಯಸ್ಥ ಹೇಮಂತ್‌ ಕರ್ಕರೆ ಅವರು ಸರ್ವನಾಶ ಆಗಲಿ ಎಂದು ಶಾಪ ಹಾಕಿದ್ದೆ. ನಾನು ಶಾಪ ಹಾಕಿದ ಕೆಲವೇ ದಿನಗಳಲ್ಲಿ 26/11ರ ಮುಂಬೈ ಸರಣಿ ದಾಳಿಯಲ್ಲಿ ಕರ್ಕರೆ ಸತ್ತರು ಎಂದು ಸಾಧ್ವಿ ಪ್ರಜ್ಞಾ ಸಿಂಗ್‌ ಹೇಳಿದ್ದರು. ಹಾಗೆಯೇ 1992ರ ಬಾಬ್ರಿ ಮಸೀದಿ ಧ್ವಂಸದಲ್ಲಿಯೂ ನಾನು ಭಾಗಿಯಾಗಿದ್ದೆ. ಖುದ್ದು ನಾನು ಮಸೀದಿಯ ಮೇಲೇರಿ ಅದನ್ನು ಕೆಡವಿದ್ದೆ. ದೇವರು ನನಗೆ ಇಂಥ ಅವಕಾಶ ಕೊಟ್ಟಿದ್ದಕ್ಕೆ ನನಗೆ ಹೆಮ್ಮೆಯಿದೆ. ಶೀಘ್ರದಲ್ಲೇ ರಾಮಮಂದಿರ ನಿರ್ಮಾಣ ಮಾಡಲಾಗುತ್ತದೆ ಎಂದಿದ್ದರು ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌.