ಬಾಗಲಕೋಟೆ[ಏ.20]: ಪಕ್ಷಕ್ಕಾಗಿ ಜೀವನವನ್ನೇ ಸವೆಸಿದ ಅಟಲ್‌ ಬಿಹಾರಿ ವಾಜಪೇಯಿ ಮತ್ತು ಎಲ್‌.ಕೆ.ಅಡ್ವಾಣಿ ಅವರನ್ನು ಮೂಲೆಗುಂಪು ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ವರ್ತನೆಯನ್ನು ಯಾರೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಹೇಳಿದರು.

ಬಾಗಲಕೋಟೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಅಟಲ್‌ ಬಿಹಾರಿ ವಾಜಪೇಯಿ ಅವರಿಲ್ಲ. ಲಾಲಕೃಷ್ಣ ಅಡ್ವಾಣಿ ಇದ್ದು ಇಲ್ಲದಂತಾಗಿದ್ದಾರೆ. ಮೋದಿ ಮತ್ತು ಅಮಿತ್‌ ಶಾ ಆಡಳಿತ, ಇವರನ್ನು ಈ ಪರಿಸ್ಥಿತಿಗೆ ತರುವಂತೆ ಮಾಡಿದೆ ಎಂದು ದೂರಿದರು. ಅಡ್ವಾಣಿಯಂತಹ ನಾಯಕರನ್ನೇ ಗೌರವದಿಂದ ಕಾಣದ ಮೋದಿ ಮತ್ತು ಅಮಿತ್‌ ಶಾ, ಬಿಜೆಪಿಯನ್ನು ಮೋದಿ-ಶಾ ಪಕ್ಷವನ್ನಾಗಿ ರೂಪಿಸಲು ಹೊರಟಂತಿದೆ ಎಂದರು.

ಪ್ರಧಾನಿ ಆದಂತವರು ಮಾತನಾಡುವ ಸಂದರ್ಭದಲ್ಲಿ ಯಾವುದಕ್ಕೆ ಆದ್ಯತೆ ನೀಡಬೇಕು ಎಂಬುದು ಅರಿವಿರಬೇಕು. ಲಿಂಗಾಯತ ಧರ್ಮ ವಿಚಾರದಂತಹ ವಿಷಯ ಪ್ರಸ್ತಾಪಿಸುವ ಬದಲು ಕುಡಚಿ ರೈಲು ಮಾರ್ಗ, ಮಹದಾಯಿ ಯೋಜನೆ ಕುರಿತು ಮಾತನಾಡಿದ್ದರೆ ಅವರ ಗೌರವ ಹೆಚ್ಚುತ್ತಿತ್ತು. ಚುನಾವಣೆ ಸಂದರ್ಭದಲ್ಲಿ ಸೈನಿಕರನ್ನು ಮುಂದಿಟ್ಟುಕೊಂಡು ಪ್ರಚಾರ ಪಡೆಯುವ ಸಣ್ಣತನ ಮಾಡಬಾರದು ಎಂದರು.