ಜೆಡಿಎಸ್ ಜೊತೆಗೆಇನ ಮೈತ್ರಿಯಿಂದ ಯಾವುದೇ ರೀತಿಯಾದ ಲಾಭವಾಗಿಲ್ಲ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಹೇಳಿದ್ದಾರೆ. 

ಬೆಂಗಳೂರು :  ರಾಜ್ಯದಲ್ಲಿ ಜೆಡಿಎಸ್‌ ಪಕ್ಷದೊಂದಿಗೆ ಮಾಡಿಕೊಂಡಿರುವ ಚುನಾವಣಾ ಪೂರ್ವ ಮೈತ್ರಿಯಿಂದ ಕಾಂಗ್ರೆಸ್‌ಗೆ ಯಾವುದೇ ರೀತಿಯ ಲಾಭವೂ ಆಗಿಲ್ಲ. ಕಾಂಗ್ರೆಸ್‌ ಸ್ವತಂತ್ರವಾಗಿ ಚುನಾವಣೆ ಎದುರಿಸಿದ್ದರೆ ಇದಕ್ಕಿಂತ ಉತ್ತಮ ಅವಕಾಶವಿತ್ತು ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರೆದುರು ವಾದ ಮಂಡಿಸಿದ್ದಾರೆ.

ಭಾನುವಾರ ದೆಹಲಿಯಲ್ಲಿ ರಾಹುಲ್‌ ಗಾಂಧಿ ಅವರೊಂದಿಗೆ ನಡೆದ ಸಭೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಿಂದ ಆಗಿರುವ ಲಾಭ-ನಷ್ಟಗಳ ಬಗ್ಗೆ ಅವರು ವಿವರಣೆ ನೀಡಿದರು. ಈ ವೇಳೆ ಕಾಂಗ್ರೆಸ್‌ ಅಭ್ಯರ್ಥಿಗಳು ಸ್ಪರ್ಧಿಸಿದ ಕಡೆ ಜೆಡಿಎಸ್‌ ಸೂಕ್ತ ಬೆಂಬಲ ನೀಡಿಲ್ಲ. ಮೈತ್ರಿ ಬದಲಿಗೆ ಸ್ವತಂತ್ರವಾಗಿ ಸ್ಪರ್ಧಿಸಿದ್ದರೆ ಹೆಚ್ಚು ಸ್ಥಾನ ಗಳಿಸಬಹುದಿತ್ತು ಎಂಬ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌ ಪ್ರಾಬಲ್ಯವಿರುವ ಕಡೆ ಜೆಡಿಎಸ್‌ಗೆ ನೇರ ಪೈಪೋಟಿ ಇರುವುದು ಕಾಂಗ್ರೆಸ್‌ನಿಂದ ಮಾತ್ರ. ಇಂತಹ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು ಕಾಂಗ್ರೆಸ್‌ನ ತಳಮಟ್ಟದ ಸಂಘಟನೆಗೆ ಹಾನಿ ಮಾಡಿಕೊಂಡಂತಾಗಿದೆ. ದಶಕಗಳ ಕಾಲ ಕಾಂಗ್ರೆಸ್‌ ಕಾರ್ಯಕರ್ತರು ಹೋರಾಟ ನಡೆಸಿರುವ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡುವಂತೆ ಪಕ್ಷ ಅವರಿಗೆ ತಾಕೀತು ಮಾಡಿದೆ. ಇದರಿಂದ ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗಿ ಪಕ್ಷಕ್ಕೆ ನಷ್ಟಉಂಟಾಗಿದೆ. ಇಂತಹ ಕಡೆ ಬಿಜೆಪಿ ಪರ್ಯಾಯವಾಗಿ ರೂಪುಗೊಳ್ಳಲು ನಾವೇ ನೆರವು ಮಾಡಿಕೊಟ್ಟಂತಾಗಿದೆ. ಇಂತಹ ಹಲವು ಸಮಸ್ಯೆಗಳು ಮೈತ್ರಿಯಿಂದ ಸೃಷ್ಟಿಯಾಗಿವೆ ಎಂದು ಸಿದ್ದರಾಮಯ್ಯ ಗಮನಕ್ಕೆ ತಂದಿದ್ದಾರೆ ಎಂದು ತಿಳಿದು ಬಂದಿದೆ.

ಇದಕ್ಕೆ ರಾಹುಲ್‌ ಗಾಂಧಿ ತದ್ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕೆಲವು ಕಡೆ ಹೊಂದಾಣಿಕೆ ಸಮಸ್ಯೆಗಳು ಆಗಿರಬಹುದು. ಆದರೆ ಬಹುತೇಕ ಕ್ಷೇತ್ರಗಳಲ್ಲಿ ಇದು ಕಾಂಗ್ರೆಸ್‌ಗೆ ನೆರವಾಗಿರಬಹುದು. ಸಮಸ್ಯೆ ಆಗಿದೆ ಅಥವಾ ಲಾಭ ಆಗಿದೆ ಎಂಬ ಬಗ್ಗೆ ಮೇ 23ರ ಬಳಿಕ ಚರ್ಚೆ ಮಾಡುವುದು ಒಳಿತು ಎಂದು ಹೇಳಿ ಈ ಬಗೆಗಿನ ಚರ್ಚೆ ಮುಂದೂಡಿದರು ಎನ್ನಲಾಗಿದೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.