ನವದೆಹಲಿ(ಏ.18): ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಾಕಿಸ್ತಾನಕ್ಕೆ ಅನುಕೂಲ ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಯನ್ನು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ಷಡ್ಯಂತ್ರ ಎಂದು ಜರೆದಿದ್ದಾರೆ.

ಶತಾಯಗತಾಯ ಅಧಿಕಾರ ಹಿಡಿಯಬೇಕೆಂಬ ಕಾಂಗ್ರೆಸ್ ದುರಾಸೆಯೇ, ಆ ಪಕ್ಷವನ್ನು ಇಮ್ರಾನ್ ಖಾನ್ ಅವರಿಂದ ಇಂತಹ ಹೇಳಿಕೆ ನೀಡಿಸುವಷ್ಟು ಕೀಳು ಮಟ್ಟಕ್ಕೆ ಕೊಂಡೊಯ್ದಿದೆ ಎಂದು ನಿರ್ಮಲಾ ಸೀತಾರಾಮನ್ ಹರಿಹಾಯ್ದಿದ್ದಾರೆ.

ಬಾಲಾಕೋಟ್ ದಾಳಿಯ ಬಳಿಕ ಮುದುರಿರುವ ರಾಷ್ಟ್ರದ ಪ್ರಧಾನಿಯಿಂದ ಇಂತಹ ಹೇಳಿಕೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿರುವ ನಿರ್ಮಲಾ, ಚುನಾವಣೆಯಲ್ಲಿ ಮೋದಿ ವರ್ಚಸ್ಸು ಕುಂದಿಸಲು ಕಾಂಗ್ರೆಸ್ ಪಕ್ಷವೇ ಇಮ್ರಾನ್ ಅವರಿಂದ ಇಂತಹ ಹೇಳಿಕೆ ಕೊಡಿಸಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ನ ಹಲವು ಪ್ರಮುಖ ನಾಯಕರು ಪಾಕಿಸ್ತಾನಕ್ಕೆ ತೆರಳಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಲು ಸಹಾಯ ಕೋರಿದ್ದಾರೆ. ಇದು ಕಾಂಗ್ರೆಸ್ ಪಕ್ಷ ರಚಿಸಿದ್ದ ಕುತಂತ್ರದ ಯೋಜನೆಗಳಲ್ಲೊಂದು ಎಂಬುದು ತಮ್ಮ ಅಭಿಪ್ರಾಯ ಎಂದು ರಕ್ಷಣಾ ಸಚಿವೆ ಸ್ಪಷ್ಟಪಡಿಸಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.