ಬೆಂಗಳೂರು, [ಮಾ.19]: ಮೊದಲ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಇಂದಿನಿಂದ [ಮಂಗಳವಾರ] ಆರಂಭವಾಗಿದ್ದು, ಎಚ್.ಡಿ.ದೇವೇಗೌಡ ಅವರ ಮೊಮ್ಮಕ್ಕಳಾದ ಪ್ರಜ್ವಲ್ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆಗೆ ಮುಹೂರ್ತ ನಿಗದಿಯಾಗಿದೆ.

ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರು ಹಾಸನದಿಂದ ಕಣಕ್ಕಿಳಿಸಿದ್ದು, ಇದೇ ಶುಕ್ರವಾರ [ಮಾ.22]ದಂದು ನಾಮಪತ್ರ ಸಲ್ಲಿಸಲಿದ್ದಾರೆ.

ಮತ್ತೊಂದೆಡೆ ಮಂಡ್ಯದಿಂದ ಅದೃಷ್ಟ ಪರೀಕ್ಷೆಗಿಳಿದಿರುವ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಸಹ ಮಾರ್ಚ್​ 25ಕ್ಕೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಕರ್ನಾಟಕದಲ್ಲಿ 2 ಹಂತದಲ್ಲಿ ಲೋಕಸಭಾ ಚುನಾವಣೆ, ಏ.18,23ರಂದು ಮತದಾನ

ನಿನ್ನೆ [ಸೋಮವಾರ೦ ಸಿಎಂ ಕುಮಾರಸ್ವಾಮಿ ಅವರು ಕುಟುಂಬ ಸಮೇತ ಶೃಗೇರಿಗೆ ತೆರಳಿ ನಿಖಿಲ್ ನಾಮಪತ್ರಕ್ಕೆ ಪೂಜೆ ಮಾಡಿಕೊಂಡಿಸಿಕೊಂಡು ಆಗಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಾಂಗ್ರೆಸ್​ ಬೆಂಬಲ ಪಡೆದು ಜೆಡಿಎಸ್​ ಪ್ರಜ್ವಲ್ ಹಾಗೂ ನಿಖಿಲ್ ಕುಮಾರಸ್ವಾಮಿಯನ್ನ ಕಣಕ್ಕಿಳಿಸಿದೆ. ಇವರಿಬ್ಬರ ಗೆಲುವಿಗಾಗಿ ಸರ್ಕಸ್​ ನಡೆಸುತ್ತಿರುವ ಜೆಡಿಎಸ್​ ನಾಮಪತ್ರ ಸಲ್ಲಿಕೆ ದಿನ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಿದೆ. ಇನ್ನು ಸುಮಲತಾ ಅಂಬರೀಶ್ ಅವರು ಸಹ ನಾಳೆ [ಬುಧವಾರ] ಮಂಡ್ಯದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 

ಮೊದಲ ಹಂತದ ಚುನಾವಣೆಯ ಡಿಟೇಲ್ಸ್
* ಕರ್ನಾಟಕದ ಮೊದಲ ಹಂತದ ಚುನಾವಣೆ ಏಪ್ರಿಲ್ 18ರಂದು.
*ಮೊದಲ ಹಂತದ ಚುನಾವಣೆ ನಾಮಪತ್ರ ಸಲ್ಲಿಕೆ ಮಾರ್ಚ್ 19ರಿಂದ.
*ಮೊದಲ ಹಂತದ ಚುನಾವಣೆ ನಾಮಪತ್ರ ಸಲ್ಲಿಕೆಗೆ ಮಾರ್ಚ್ 26 ಕೊನೆ ದಿನ.
* ಮೊದಲ ಹಂತದ ಚುನಾವಣೆ ನಾಮಪತ್ರಗಳ ಪರಿಶೀಲನೆ ಮಾರ್ಚ್ 27.
* ನಾಮಪತ್ರ ವಾಪಸ್ ಪಡೆಯಲು ಮಾರ್ಚ್ 29 ಕೊನೆ ದಿನ.

2ನೇ ಹಂತದ ಚುನಾವಣೆಯ ಡಿಟೇಲ್ಸ್
* ಮತದಾನ ನಡೆದರೆ, ಇನ್ನುಳಿದ 14 ಕ್ಷೇತ್ರಗಳಿಗೆ ಏಪ್ರಿಲ್ 23 ಮಂಗಳವಾರ  2ನೇ ಹಂತದ ಮತದಾನ ನಡೆಯಲಿದೆ.
*ಮಾರ್ಚ್ 28ರಿಂದ 2ನೇ ಹಂತದ ಚುನಾವಣೆ ನಾಮಪತ್ರ ಸಲ್ಲಿಕೆ .
*ಎರಡನೇ ಹಂತದ ಚುನಾವಣೆ ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 4 ಕೊನೆ ದಿನ.
*ಎರಡನೇ ಹಂತದ ಚುನಾವಣೆ ನಾಮಪತ್ರಗಳ ಪರಿಶೀಲನೆ ಏಪ್ರಿಲ್ 5.
*ನಾಮಪತ್ರ ವಾಪಸ್ ಪಡೆಯಲು ಮಾರ್ಚ್  ಕೊನೆ ದಿನ ಏಪ್ರಿಲ್ 8.

ಮೊದಲ ಹಂತದ 14 ಕ್ಷೇತ್ರಗಳು (ಏ.18)
ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ಮಂಡ್ಯ, ತುಮಕೂರು, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ.

2ನೇ ಹಂತದ ಚುನಾವಣೆ (ಏ.23)
ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ.