ಮಂಡ್ಯ(ಮಾ.28): ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಿಎಂ ಕುಮಾರಸ್ವಾಮಿ ಪ್ರತಿಷ್ಠೆಯ ಕಣವಾಗಿರುವ ಮಂಡ್ಯ ಕ್ಷೇತ್ರ ರಾಜಕೀಯ ಚದುರಂಗದಾಟಕ್ಕೂ ವೇದಿಕೆಯಾಗುತ್ತಿದೆ. ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ಗೆ ಶಾಕ್ ನೀಡಿದ್ದ ಜೆಡಿಎಸ್ ಅಭ್ಯರ್ಥಿ, ಕುಮಾರಸ್ವಾಮಿ ಪುತ್ರ, ನಿಖಿಲ್ ಕುಮಾರಸ್ವಾಮಿಗೆ ಇದೀಗ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ: ನಾಮಪತ್ರ ವಾಪಸ್ ಪಡೆದ ಓರ್ವ ಸುಮಲತಾ

ನಿಖಿಲ್ ಕುಮಾರಸ್ವಾಮಿ ನಾಮಪತ್ರ ಅಸಿಂಧುವಾಗುತ್ತಾ ಅನ್ನೋ ಆತಂಕ ಜೆಡಿಎಸ್ ಪಾಳಯದಲ್ಲಿ ಆವರಿಸಿದೆ. ನಿನ್ನೆ(ಮಾ.27) ಹಳೇ ಮಾದರಿಯಲ್ಲಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಮಂಡ್ಯ ಜಿಲ್ಲಾಧಿಕಾರಿ ನಿಕಿಲ್ ಕುಮಾರಸ್ವಾಮಿ ಕರೆಸಿ ಹೊಸ ನಾಮಪತ್ರ ಸ್ವೀಕರಿಸಿದ್ದರು. ಇದರ ವಿರುದ್ಧ ಸುಮಲತಾ ಅಂಬರೀಷ್ ಬೆಂಬಲಿಗರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

ಇದನ್ನೂ ಓದಿ:ಪುತ್ರನ ಗೆಲುವಿಗೆ ಪಣ; ಹೊಸ ದಾಳ ಉರುಳಿಸಿದ ಕುಮಾರಣ್ಣ

ಅವಧಿ ಮುಗಿದ ಬಳಿಕ, ಕಾನೂನು ಬಾಹಿರವಾಗಿ ಹೊಸ ಮಾದರಿ ನಾಮಪತ್ರವನ್ನು ಜಿಲ್ಲಾಧಿಕಾರಿ ಸ್ವೀಕರಿಸಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ನಿಖಿಲ್ ನಾಮಪತ್ರ ಅಸಿಂಧುಗೊಳಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ. ಇದೀಗ ಚುನಾವವಣಾ ವೀಕ್ಷಕರು ಮಂಡ್ಯಕ್ಕೆ ಆಗಮಿಸಿ, ದೂರುದಾರರ ಜೊತೆ ಗೌಪ್ಯ ಚರ್ಚೆ ನಡೆಸಿದ್ದಾರೆ.  ಇತ್ತ  ಜೆಡಿಎಸ್ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಗೆ, ಪುತ್ರನ ನಾಮಪತ್ರ ಅಸಿಂಧುವಾಗೋ ಆತಂಕ ಎದುರಾಗಿದೆ. ಇಷ್ಟೇ ಅಲ್ಲ ನಿಯಮ ಉಲ್ಲಂಘಿಸಿರುವ ಆರೋಪ ಎದುರಿಸುತ್ತಿರುವ ಮಂಡ್ಯ ಜಿಲ್ಲಾಧಿಕಾರಿಯ ತಲೆದಂಡವಾಗೋ ಸಾಧ್ಯತೆ ಇದೆ.