ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಮಂಡ್ಯ ಅಭ್ಯರ್ಥಿಯಾಗಿ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಿರಿಯ ರಾಜಕೀಯ ಮುಖಂಡ KR ಪೇಟೆ ಕೃಷ್ಣ ಅವರನ್ನು ನಿಖಿಲ್ ಕುಮಾರಸ್ವಾಮಿ ಭೇಟಿಯಾಗಿ ಆಶಿರ್ವಾದ ಪಡೆದುಕೊಂಡಿದ್ದಾರೆ.
ಮಂಡ್ಯ : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದ JDS ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿದ್ದಾರೆ.
ಈ ಸಂಬಂಧ ಕೆ.ಆರ್.ಪೇಟೆ ಕೃಷ್ಣ ಅವರು ನಿಖಿಲ್ ಕುಮಾರಸ್ವಾಮಿಗೆ ಕಿವಿಮಾತು ಹೇಳಿದ್ದಾರೆ. ಇಷ್ಟು ಬೇಗ ರಾಜಕೀಯಕ್ಕೆ ಯಾಕೆ ಬಂದೆ ಎಂದು ಪ್ರಶ್ನೆ ಮಾಡಿದ್ದು, ಸಿನಿಮಾ ಕ್ಷೇತ್ರದಲ್ಲಿ ಇದ್ದಿದ್ದರೆ ಇನ್ನಷ್ಟು ಬೆಳೆಯಬಹುದಿತ್ತು ಎಂದರು.
ಇನ್ನೂ ಕೂಡ ಹೆಚ್ಚಿನ ಸಮಯಾವಕಾಶವಿದ್ದು, ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಬಹುದಿತ್ತು. ಚಿಕ್ಕ ವಯಸ್ಸಿಗೆ ರಾಜಕೀಯಕ್ಕೆ ಬರುವ ಅವಶ್ಯಕತೆ ಏನಿತ್ತು ಎಂದು ಕೇಳಿದ್ದಾರೆ.
ಅಲ್ಲದೇ ಮೊದಲು ರಾಜ್ಯ ರಾಜಕೀಯಕ್ಕೆ ಪ್ರವೇಶಿಸಿ ನಂತರ ಲೋಕಸಭಾ ಕ್ಷೇತ್ರಕ್ಕೆ ಬರಬಹುದಿತ್ತು ಎಂದು ನಿಖಿಲ್ ರಾಜಕೀಯ ಪ್ರವೇಶದ ಬಗ್ಗೆ ಕೃಷ್ಣ ಪಾಠ ಹೇಳಿದ್ದಾರೆ.
ತಕ್ಷಣವೇ ಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅನಿತಾ ಕುಮಾರಸ್ವಾಮಿ, ಇದೆಲ್ಲಾ ವಿಧಿ ನಿಯಮ. ನಿಖಿಲ್ ರಾಜಕೀಯಕ್ಕೆ ಬರಬೇಕೆಂದು ಕಾರ್ಯಕರ್ತರ ಒತ್ತಾಯವಿತ್ತು. ಆದ್ದರಿಂದ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವುದಾಗಿ ಹೇಳಿದರು. ನಿಮ್ಮ ಆಶಿರ್ವಾದ ಪಡೆಯಲು ಬಂದಿದ್ದಾನೆ. ಆಶಿರ್ವಾದ ಮಾಡಿ ಎಂದು ಕೇಳಿಕೊಂಡರು.
