ನವದೆಹಲಿ[ಮಾ.20]: ಚುನಾವಣೆಗೆ ಹಣ ಹೊಂದಿಸುವುದು, ಸಂಸತ್ತಿನಲ್ಲಿ ಖಾಸಗಿ ಕಂಪನಿಗಳ ಪರ ಪ್ರಶ್ನೆ ಕೇಳಲು ಅಂಥ ಕಂಪನಿಗಳಿಂದ ಹಣ ಸ್ವೀಕರಿಸುವುದು, ಚುನಾವಣೆಯಲ್ಲಿ ತಮ್ಮ ಪರ ಕೆಲಸ ಮಾಡಿದವರಿಗೆ ಚುನಾವಣೆ ನಂತರ ‘ಫೇವರ್‌’ ಮಾಡುವುದು- ಇಂಥ ಅನೇಕ ವಿಷಯಗಳನ್ನು ಟೀವಿ ರಹಸ್ಯ ಕಾರ್ಯಾಚರಣೆಯೊಂದರಲ್ಲಿ ಮೂವರು ಸಂಸದರು ಬಾಯಿ ಬಿಟ್ಟಿದ್ದಾರೆ.

‘ರಿಪಬ್ಲಿಕ್‌ ಭಾರತ್‌’ ಹಿಂದಿ ಚಾನೆಲ್‌ ನಡೆಸಿರುವ ಈ ರಹಸ್ಯ ಕಾರ್ಯಾಚರಣೆಯಲ್ಲಿ ಉತ್ತರಪ್ರದೇಶದ ಘೋಸಿ ಕ್ಷೇತ್ರದ ಬಿಜೆಪಿ ಸಂಸದ ಹರಿನಾರಾಯಣ ರಾಜಭರ್‌, ಬಿಹಾರದ ಸೀತಾಮಢಿಯ ರಾಷ್ಟ್ರೀಯ ಲೋಕಸಮತಾ ಪಕ್ಷದ ಸಂಸದ ರಾಮ್‌ಕುಮಾರ್‌ ಶರ್ಮಾ ಹಾಗೂ ಪಂಜಾಬ್‌ನ ಜಲಂಧರ್‌ನ ಕಾಂಗ್ರೆಸ್‌ ಸಂಸದ ಸಂತೋಕ್‌ ಸಿಂಗ್‌- ಸಿಕ್ಕಿಬಿದ್ದವರು. ‘ರಿಪಬ್ಲಿಕ್‌ ಭಾರತ್‌’ ವರದಿಗಾರರು ರಹಸ್ಯವಾಗಿ ತಾವು ‘ಏಜೆಂಟರೆಂದು’ ಪರಿಚಯಿಸಿಕೊಂಡು ಹೋದಾಗ ಈ ಸಂಸದರು ‘ಚುನಾವಣಾ ಖರ್ಚುವೆಚ್ಚದ ರಹಸ್ಯ’ಗಳನ್ನು ಹೊರಹಾಕಿದ್ದಾರೆ.

ರಾಜಭರ್‌ ಹೇಳಿದ್ದೇನು?:

ಅನೇಕರು 5-6 ಕೋಟಿ ರು.ಗಳನ್ನು ಕಳೆದ ಲೋಕಸಭೆ ಚುನಾವಣೆಗೆ ಖರ್ಚು ಮಾಡಿ ಸೋತರು. ನಾನು ಮಾತ್ರ 85 ಲಕ್ಷ ಖರ್ಚು ಮಾಡಿ ಗೆದ್ದೆ. ಸಂದರ್ಭ ಬಂದಾಗ ಮತದಾರರಿಗೆ ಹಣ ಹಂಚಬೇಕಾಗುತ್ತೆ. ಇನ್ನು ನೀವು (ಜನ) ಚುನಾವಣೆಗೆ ಸಂಬಂಧಿಸಿದಂತೆ ‘ಸಹಾಯ’ ಮಾಡಬಹುದು. ನಮ್ಮ ಪ್ರಚಾರ, ಚುನಾವಣಾ ಪ್ರವಾಸದ ಖರ್ಚುವೆಚ್ಚ, ಪೆಟ್ರೋಲ್‌ ಖರ್ಚು ಇತ್ಯಾದಿಗಳನ್ನು ನೋಡಿಕೊಳ್ಳಬಹುದು. ಚುನಾವಣೆ ನಂತರ ನಾವು ನಿಮ್ಮ ‘ಕಾಳಜಿ’ ವಹಿಸುತ್ತೇವೆ.

ಶರ್ಮಾ ಹೇಳಿದ್ದೇನು?:

ಆಂಧ್ರದಲ್ಲಿ ಚುನಾವಣೆ ಗೆಲ್ಲಲು 50 ಕೋಟಿ ಬೇಕು. ಬಿಹಾರದಲ್ಲಿ 10-12-15 ಕೋಟಿ ಸಾಕು. ಇನ್ನು ಒಂದು ಕಂಪನಿಯ ಪರ ಲೋಕಸಭೆಯಲ್ಲಿ ಪ್ರಶ್ನೆ ಕೇಳಬೇಕೆಂದರೆ ಅದರ ಮೌಲ್ಯ 5-10 ಕೋಟಿ ಆಗುತ್ತದೆ. ಪ್ರಶ್ನೆ ಕೇಳೋದಕ್ಕೆ ಪ್ರತ್ಯುಪಕಾರವಾಗಿ *** ಅವರು ಕಳೆದ ಲೋಕಸಭೆ ಚುನಾವನೆಯಲ್ಲಿ ನನ್ನ ಇಡೀ ಖರ್ಚನ್ನು ನೋಡಿಕೊಂಡಿದ್ದರು.

ಸಂತೋಕ್‌ ಹೇಳಿದ್ದೇನು?:

ಈಗ ಗುತ್ತಿಗೆ, ಟೆಂಡರ್‌ ವಿಚಾರಗಳೆಲ್ಲ ಆನ್‌ಲೈನ್‌ ಆಗಿದ್ದರಿಂದ ಭ್ರಷ್ಟಾಚಾರ ಕಷ್ಟವಾಗಿದೆ. ಇನ್ನು ನೋಟು ರದ್ದತಿ ಕಾರಣದಿಂದ ಕಪ್ಪುಹಣದ ಹರಿವು ಕಮ್ಮಿ ಆಗಿದೆ. ಎಲ್ಲೂ ಕ್ಯಾಷ್‌ ನಡೀತಿಲ್ಲ. ಇನ್ನು ಚುನಾವಣೆಯಲ್ಲಿ ಯಾರಾದರೂ ‘ಹೆಲ್ಪ್‌’ ಮಾಡೋರಿದ್ರೆ ಹೇಳಿ. ಅವರನ್ನು ಭೇಟಿ ಮಾಡಿಸಿ. ‘ಬಂಡವಾಳ’ ಸ್ವೀಕಾರಕ್ಕೆ ಸಿದ್ಧ.