ನವದೆಹಲಿ[ಮೇ.03]: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವೊಂದು ಪಕ್ಷಕ್ಕೂ ಬಹುಮತ ಲಭಿಸುವುದಿಲ್ಲ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಪ್ರಧಾನಿ ಹುದ್ದೆಗೇರುವ ಕನಸು ಈಡೇರುವುದಿಲ್ಲ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌ ಅಂಬೇಡ್ಕರ್‌ ಅವರ ಮೊಮ್ಮಗ ಪ್ರಕಾಶ್‌ ಅಂಬೇಡ್ಕರ್‌ ಅವರು ಪ್ರತಿಪಾದಿಸಿದ್ದಾರೆ.

ಅಲ್ಲದೆ, ಇಂಥ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಪ್ರಧಾನಿ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಗುರುವಾರ ಮಾತನಾಡಿದ ವಂಚಿತ್‌ ಬಹುಜನ್‌ ಅಘಾಡಿ ಪಕ್ಷದ ಸಂಚಾಲಕ ಪ್ರಕಾಶ್‌ ಅವರು, ‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರುವುದಿಲ್ಲ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿ ಅಥವಾ ರಾಹುಲ್‌ ಗಾಂಧಿ ಇಬ್ಬರಲ್ಲಿ ಯಾರೊಬ್ಬರೂ ಪ್ರಧಾನಿಯಾಗಲಾರರು. ಈ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ತೃತೀಯ ರಂಗದ ನಾಯಕರೊಬ್ಬರು ಪ್ರಧಾನಿಯಾಗುವ ಸಾಧ್ಯತೆಯಿದೆ,’ ಎಂದು ಹೇಳಿದರು.

ಅಲ್ಲದೆ, ಕರ್ನಾಟಕದ ಜೆಡಿಎಸ್‌ ವರಿಷ್ಠ ಎಚ್‌ಡಿಡಿ ಅವರು ಎಲ್ಲರೂ ಒಪ್ಪುವಂತಹ ಹಾಗೂ ಕಾಂಗ್ರೆಸ್‌ ಹಾಗೂ ಬಿಜೆಪಿ ಹೊರತಾದ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ ಎಂದರು.