ಪ್ರಧಾನಿ ಮೋದಿಯನ್ನು ನವವಧುವಿಗೆ ಹೋಲಿಸಿದ ಸಿಧು| ‘ಮೋದಿ ಕೇವಲ ನವವಧುವಿನಂತೆ ಬಳೆಗಳ ಶಬ್ಧ ಮಾಡುತ್ತಾರೆ’| ಮೋದಿಗೆ ಕೆಲಸ ಮಾಡಿ ಗೊತ್ತಿಲ್ಲ ಎಂದ ಕಾಂಗ್ರೆಸ್ ನಾಯಕ| ‘ಕಡಿಮೆ ಕೆಲಸ ಮಾಡಿ ಬಿಲ್ಡಪ್ ತೆಗೆದುಕೊಳ್ಳುತ್ತಾರೆ’|
ಇಂಧೋರ್(ಮೇ.11): ಪ್ರಧಾನಿ ಮೋದಿ ವಿರುದ್ಧ ತಮ್ಮ ಕೀಳು ಪದ ಪ್ರಯೋಗ ಮುಂದುವರೆಸಿರುವ ಕಾಂಗ್ರೆಸ್ ನಾಯಕರು, ತಮ್ಮ ಮನಸ್ಸಿಗೆ ಬಂದಂತೆ ಮೋದಿ ಕುರಿತು ಹೇಳಿಕೆ ನೀಡುತ್ತಿದ್ದಾರೆ.
ದುರ್ಯೋಧನ, ಔರಂಗ್ ಜೇಬ್, ದುಶ್ಯಾಸನ, ಜಲ್ಲಾದ್ ಹೀಗೆ ಹೊಸ ಹೊಸ ಹೆಸರುಗಳನ್ನು ಹುಡುಕುತ್ತಿರುವ ವಿಪಕ್ಷ ನಾಯಕರು, ದೇಶದ ಪ್ರಧಾನಿ ಅವರನ್ನು ವೈಯಕ್ತಿಕ ನಿಂದನೆಗಳಿಂದ ಕಟ್ಟಿ ಹಾಕುವ ಪ್ರಯತ್ನ ಮುಂದುವರೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನವವಧುವಿನಂತೆ, ಕೆಲಸ ಕಡಿಮೆ ಮಾಡಿ ಹೆಚ್ಚು ಬಿಲ್ಡಪ್ ತೆಗೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ವ್ಯಂಗ್ಯವಾಡಿದ್ದಾರೆ.
ಅಡುಗೆ ಮಾಡಲಾಗದ ವಧು ಹೆಚ್ಚು ಕೆಲಸ ಮಾಡುತ್ತಿದ್ದೇನೆ ಎಂದು ನೆರೆಹೊರೆಯವರು ತಿಳಿದುಕೊಳ್ಳಲಿ ಎಂದು ಬಳೆಗಳ ಶಬ್ದ ಜಾಸ್ತಿ ಮಾಡುತ್ತಾಳೆ. ಹಾಗೆಯೇ ನರೇಂದ್ರ ಮೋದಿ ಸರ್ಕಾರ ಕೂಡ ಕೇವಲ ಶಬ್ಧ ಮಾಡುತ್ತಿದೆ ಎಂದು ಸಿಧು ಕಿಡಿಕಾರಿದರು.
ಇನ್ನು ಸಿಧು ಹೇಳಿಕೆಗೆ ತೀವ್ರ ಟೀಕೆ ವ್ಯಕ್ತವಾಗಿದ್ದು, ಪ್ರಧಾನಿ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಸಿಧು ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಹರಿಹಾಯ್ದಿದೆ.
