ಚಂಡೀಗಢ[ಮೇ.14]: ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್‌ ಮುಖಂಡ ನವಜೋತ್‌ ಸಿಂಗ್‌ ಸಿಧು, ಕಳೆದ 28 ದಿನಗಳಲ್ಲಿ 80 ರ‍್ಯಾಲಿಗಳಲ್ಲಿ ನಿರಂತರವಾಗಿ ಭಾಷಣ ಮಾಡಿದ ಪರಿಣಾಮವಾಗಿ ಅವರ ಧ್ವನಿಪೆಟ್ಟಿಗೆ ಹಾನಿ ಉಂಟಾಗಿದೆ. ಸಿಧು ಅವರಿಗೆ ಸ್ಟೆರಾಯ್ಡ್‌ ಮತ್ತು ಚುಚ್ಚು ಮದ್ದುಗಳನ್ನು ನೀಡಲಾಗಿದ್ದು, 4 ದಿನಗಳ ಕಾಲ ಮಾತನಾಡದಂತೆ ಮತ್ತು 48 ಗಂಟೆಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಕಾಂಗ್ರೆಸ್‌ನ ಸ್ಟಾರ್‌ ಪ್ರಚಾರಕರಲ್ಲಿ ಒಬ್ಬರಾದ ಸಿಧು ಮೇ 14ರಂದು ಬಿಹಾರದ ಪಟನಾ ಸಾಹಿಬ್‌ ಮತ್ತು ಮೇ 15ರಂದು ಪೊಂಟಾ ಸಾಹಿಬ್‌, ಬಿಲಾಸ್ಪುರ ಮತ್ತು ಹಿಮಾಚಲ ಪ್ರದೇಶದ ನಾಲಾಗಢ್‌ನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಬೇಕಿದ್ದು, ಈ ರಾರ‍ಯಲಿಗಳಿಗೆ ಸಿಧು ಅಲಭ್ಯರಾಗಲಿದ್ದಾರೆ.

ಪ್ರಚಾರದ ಕೊನೆಯ ಎರಡು ದಿನವಾದ ಮೇ 16 ಮತ್ತು ಮೇ 17ರಂದು ಅವರು ಮಧ್ಯಪ್ರದೇಶದಲ್ಲಿ ಚುನಾವಣೆ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಸಿಧು ಅವರ ಕಚೇರಿಯ ಹೇಳಿಕೆ ತಿಳಿಸಿದೆ.