ಇಟಾರ್ಸಿ: ಲೋಕಸಭಾ ಚುನಾವಣೆಗಳು ಅಂತಿಮ ಹಂತ ಪ್ರವೇಶ ಮಾಡುತ್ತಿರುವಂತೆಯೇ, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ, ನನ್ನನ್ನು ಮುಗಿಸಲು ಕಾಂಗ್ರೆಸ್ಸಿಗರು ಸಂಚು ರೂಪಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಪಕ್ಷದ ಚುನಾವಣಾ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘ದೇಶದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಹಗಲಿರುಳೂ ಶ್ರಮಿಸುತ್ತಿದ್ದರೆ, ಕಾಂಗ್ರೆಸ್‌ ವಂಶಪಾರಂಪರ್ಯ ಆಡಳಿತದ ಹೊಸ ನೇತಾರರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕಾಂಗ್ರೆಸ್ಸಿಗರು ಮೋದಿಯನ್ನು ಅದೆಷ್ಟುದ್ವೇಷ ಮಾಡುತ್ತಾರೆಂದರೆ, ಅವರು ಮೋದಿಯನ್ನು ಹತ್ಯೆ ಮಾಡುವ ಬಗ್ಗೆಯೂ ಕನಸು ಕಾಣುತ್ತಿದ್ದಾರೆ. ಆದರೆ ಮಧ್ಯಪ್ರದೇಶ ಮತ್ತು ದೇಶದ ಜನತೆ ಮೋದಿ ಪರವಾಗಿದ್ದಾರೆ ಎಂಬುದನ್ನು ಕಾಂಗ್ರೆಸ್ಸಿಗರು ಮರೆತಂತಿದೆ’ ಎಂದು ಹೇಳಿದ್ದಾರೆ.

ತಮ್ಮ ಹತ್ಯೆ ಬಗ್ಗೆ ಸಂಚು ಮಾಡಿದ್ದು ಯಾವ ಕಾಂಗ್ರೆಸ್ಸಿಗರು ಎಂಬುದನ್ನು ಮೋದಿ ನೇರವಾಗಿ ಹೇಳದೇ ಇದ್ದರೂ, ಕೆಲ ತಿಂಗಳ ಹಿಂದೆ ಕರ್ನಾಟಕದ ಕಾಂಗ್ರೆಸ್‌ ನಾಯಕ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ‘ಮಹಾತ್ಮಾ ಗಾಂಧಿಯನ್ನು ಕೊಂದ ಗೋಡ್ಸೆ ಪರ ಧ್ವನಿ ಎತ್ತುವವರು ಈ ದೇಶದಲ್ಲಿ ಇರಬಾರದು. ಒಂದು ವೇಳೆ ಪ್ರಜಾಪ್ರಭುತ್ವವನ್ನು ಕೊಲ್ಲಬೇಕು ಎಂದಾದಲ್ಲಿ, ಅಂಥ ಉದ್ದೇಶ ಹೊಂದಿರುವವರು ನಿಜವಾಗಿಯೂ ಧೈರ್ಯ ಹೊಂದಿದ್ದರೆ ಮೋದಿಯನ್ನು ಕೊಲ್ಲಬೇಕು’ ಎಂಬ ಹೇಳಿಕೆಯನ್ನೇ ನೆನೆಪಿಸಿ ಈ ಮಾತು ಆಡಿರಬಹುದು ಎಂದು ವಿಶ್ಲೇಷಿಸಲಾಗಿದೆ.