ಮಂಗಳೂರು[ಮೇ.23]: ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ ದಕ್ಷಿಣ ಕನ್ನಡದಲ್ಲಿ ಬಿಜೆಪಿ ತನ್ನ ಓಟ ಮುಂದುವರೆಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಇಮೇಜ್‌ ಆಧರಿಸಿಯೇ ಸತತ ಮೂರನೇ ಬಾರಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಗೆಲುವಿನ ನಗೆ ಬೀರಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕನಕ್ಕಿಳಿದಿದ್ದ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ನಳಿನ್ ಕುಮಾರ್ ಗೆ ಟಫ್ ಫೈಟ್ ನೀಡುವ ಅನುಮಾನ ವ್ಯಕ್ತವಾಗಿತ್ತು. ಆದರೀಗ ಈ ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿರುವ ಲೋಕ ಫಲಿತಾಂಶ ಮಂಗಳೂರಿನಲ್ಲಿ ಬಿಜೆಪಿ ನಾಗಾಲೋಟ ಮುಂದುವರೆಸುವುದನ್ನು ಖಚಿತಪಡಿಸಿದೆ.

ಸುಮಾರು 2 ಲಕ್ಷ 47 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಸೋಲಿಸಿರುವ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹ್ಯಾಟ್ರಿಕ್ ಗೆಲುವು ಕಂಡಿದ್ದಾರೆ. 

ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್‌, ತನ್ನದೇ ಪಕ್ಷದ ಸಂಸದರನ್ನು ನೋಡದೆ 27 ವರ್ಷ ಕಳೆದಿದೆ. ಪ್ರತಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ಮಣೆ ಹಾಕುತ್ತಿತ್ತು. ಈ ಬಾರಿಯೂ ಹಿರಿಯ ನಾಯಕರು ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅಚ್ಚರಿ ಎಂಬಂತೆ ಯುವಕ ಮಿಥುನ್‌ ರೈ ಟಿಕೆಟ್‌ ಪಡೆಯುವಲ್ಲಿ ಸಫಲರಾಗಿದ್ದರು. ಆದರೆ ಹೊಸ ಮುಖ ಯಾವುದೇ ಬದಲಾವಣೆ ಮಾಡಿಲ್ಲ.