ನವದೆಹಲಿ[ಮೇ.12]: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ನಿರ್ಮೂಲನೆಗಾಗಿ ಲೋಕಪಾಲ ಸಂಸ್ಥೆ ಜಾರಿಗೆ ಆಗ್ರಹಿಸಿ 2011ರಲ್ಲಿ ಕೈಗೊಂಡ ಬೃಹತ್‌ ಪ್ರತಿಭಟನೆ ಮೂಲಕ ನಾಯಕನಾಗಿ ಹೊರಹೊಮ್ಮಿದ ಆಪ್‌ ನಾಯಕ ಅರವಿಂದ್‌ ಕೇಜ್ರಿವಾಲ್‌ ವಿರುದ್ಧವೇ ಭ್ರಷ್ಟಾಚಾರದ ಗಂಭೀರ ಆರೋಪ ಕೇಳಿಬಂದಿದೆ. ಪಶ್ಚಿಮ ದೆಹಲಿಯ ಲೋಕಸಭಾ ಕ್ಷೇತ್ರದ ಟಿಕೆಟ್‌ಗಾಗಿ ಪಕ್ಷದ ಅಭ್ಯರ್ಥಿಯಾದ ಬಲ್ಬೀರ್‌ ಸಿಂಗ್‌ ಜಾಖಡ್‌ ಅವರು 6 ಕೋಟಿ ರು. ನೀಡಿದ್ದಾರೆ ಎಂದು ಸ್ವತಃ ಅವರ ಪುತ್ರ ಉದಯ್‌ ಅವರು ಆರೋಪಿಸಿದ್ದಾರೆ.

ಏತನ್ಮಧ್ಯೆ, ಈ ಆರೋಪದ ಸಂಬಂಧ ತತ್‌ಕ್ಷಣವೇ ತನಿಖೆ ನಡೆಸಬೇಕು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಆಗ್ರಹಿಸಿದೆ. ಅಲ್ಲದೆ, ಈ ಸಂಬಂಧ ಕೇಜ್ರಿವಾಲ್‌, ಗೋಪಾಲ್‌ ರಾಯ್‌ ಹಾಗೂ ಬಲ್ಬೀರ್‌ ಸಿಂಗ್‌ ಜಾಖರ್‌ ಅವರಿಗೆ ಚುನಾವಣಾ ಆಯೋಗ ನೋಟಿಸ್‌ ನೀಡಬೇಕು ಎಂದು ಬಿಜೆಪಿ ನಾಯಕ ಪ್ರವೀಣ್‌ ಖಂಡೇಲ್‌ವಾಲ್‌ ಒತ್ತಾಯಿಸಿದ್ದಾರೆ.

ಈ ಬಗ್ಗೆ ಶನಿವಾರ ಪ್ರತಿಕ್ರಿಯಿಸಿದ ಉದಯ್‌, ‘3 ತಿಂಗಳ ಹಿಂದಷ್ಟೇ ನನ್ನ ತಂದೆ ರಾಜಕೀಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದಾರೆ. ಪಶ್ಚಿಮ ದೆಹಲಿಯ ಲೋಕಸಭಾ ಕ್ಷೇತ್ರದ ಟಿಕೆಟ್‌ ಪಡೆಯಲು ನನ್ನ ತಂದೆ ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಅವರಿಗೆ 6 ಕೋಟಿ ರು. ನೀಡಿದ್ದಾರೆ. ಈ ಸಂಬಂಧ ನನ್ನ ಬಳಿ ನಂಬಲರ್ಹ ಸಾಕ್ಷ್ಯಾಧಾರವಿದೆ,’ ಎಂದು ಹೇಳಿದ್ದಾರೆ.

ಆದರೆ ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ ಬಲ್ಬೀರ್‌ ಸಿಂಗ್‌, ‘ನನ್ನ ವಿರುದ್ಧ ನನ್ನ ಪುತ್ರ ಮಾಡಿದ ಈ ಆರೋಪವನ್ನು ಖಂಡಿಸುತ್ತೇನೆ. ನಾನು ಆಪ್‌ನಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ಬಗ್ಗೆ ಪುತ್ರನ ಬಳಿ ಚರ್ಚಿಸಿಯೇ ಇಲ್ಲ. ಅವನ ಜೊತೆ ನಾನು ಮಾತನಾಡುವುದೇ ತೀರಾ ಅಪರೂಪ. 2009ರಲ್ಲಿ ನಾನು ನನ್ನ ಪತ್ನಿಗೆ ವಿಚ್ಛೇದನ ನೀಡಿದ್ದೆ. ಆ ವೇಳೆ ನ್ಯಾಯಾಲಯವು ಉದಯ್‌ನನ್ನು ನನ್ನ ಮಾಜಿ ಪತ್ನಿ ವಶಕ್ಕೆ ಒಪ್ಪಿಸಿತ್ತು. ಬಳಿಕ ಉದಯ್‌ ತನ್ನ ತಾಯಿ ಜೊತೆ ನೆಲೆಸಿದ್ದಾನೆ. ಉದಯ್‌ ಹೇಳಿಕೆ ಹಿಂದೆ ರಾಜಕೀಯ ಹಿತಾಸಕ್ತಿಗಳು ಕೆಲಸ ಮಾಡಿವೆ,’ ಎಂದು ಹೇಳಿದ್ದಾರೆ.