ಮುಂಬೈ[ಏ.19]: ರಿಲಯನ್ಸ್‌ ಸಮೂಹದ ಅಂಬಾನಿಗಳೂ ಸೇರಿದಂತೆ ದೊಡ್ಡ ದೊಡ್ಡ ಉದ್ಯಮಿಗಳು ಪ್ರಧಾನಿ ನರೇಂದ್ರ ಮೋದಿಯವರ ಹಿಂದೆ ನಿಂತಿದ್ದಾರೆಂದು ಪ್ರತಿಪಕ್ಷಗಳು ಆರೋಪಿಸುತ್ತಿರುವುದರ ನಡುವೆಯೇ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮುಕೇಶ್‌ ಅಂಬಾನಿ ಅವರು ದಕ್ಷಿಣ ಮುಂಬೈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಿಲಿಂದ್‌ ದೇವ್ರಾಗೆ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಈ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಶಿವಸೇನೆಯ ಹಾಲಿ ಸಂಸದ ಅರವಿಂದ್‌ ಸಾವಂತ್‌ ವಿರುದ್ಧ ಮಿಲಿಂದ್‌ ಸ್ಪರ್ಧಿಸಿದ್ದಾರೆ.

‘ದಕ್ಷಿಣ ಬಾಂಬೆಗೆ ಮಿಲಿಂದ್‌ ಸೂಕ್ತ ವ್ಯಕ್ತಿ’ ಎಂದು ಮುಕೇಶ್‌ ಅಂಬಾನಿ ಹೇಳುವ ವಿಡಿಯೋವನ್ನು ಸ್ವತಃ ಮಿಲಿಂದ್‌ ಟ್ವೀಟ್‌ ಮಾಡಿದ್ದಾರೆ. ‘ದಕ್ಷಿಣ ಬಾಂಬೆ ಕ್ಷೇತ್ರವನ್ನು 10 ವರ್ಷ ಪ್ರತಿನಿಧಿಸಿದ್ದ ಮಿಲಿಂದ್‌ಗೆ ಈ ಕ್ಷೇತ್ರದ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಪರಿಸರದ ಜ್ಞಾನ ಚೆನ್ನಾಗಿದೆ’ ಎಂದು ಮುಕೇಶ್‌ ಈ ವಿಡಿಯೋದಲ್ಲಿ ಹೇಳುತ್ತಾರೆ.

ಇನ್ನೊಬ್ಬ ಖ್ಯಾತ ಉದ್ಯಮಿ ಕೋಟಕ್‌ ಮಹಿಂದ್ರಾ ಬ್ಯಾಂಕ್‌ನ ಉದಯ್‌ ಕೋಟಕ್‌ ಕೂಡ ಈ ವಿಡಿಯೋದಲ್ಲಿ ‘ಮಿಲಿಂದ್‌ ನಿಜವಾಗಿಯೂ ಮುಂಬೈ ಕನೆಕ್ಷನ್‌ ಹೊಂದಿದ್ದಾರೆ. ಸಣ್ಣ ಅಂಗಡಿಕಾರರಿಂದ ಹಿಡಿದು ದೊಡ್ಡ ಉದ್ಯಮಿಗಳವರೆಗೆ ಪ್ರತಿಯೊಬ್ಬರಿಗೂ ದಕ್ಷಿಣ ಮುಂಬೈ ಅಂದರೆ ಬಿಸಿನೆಸ್‌ ನೆನಪಿಗೆ ಬರುತ್ತದೆ. ನಾವು ಮುಂಬೈಗೆ ಉದ್ದಿಮೆಗಳನ್ನು ವಾಪಸ್‌ ತಂದು ನಮ್ಮ ಯುವಕರಿಗೆ ಉದ್ಯೋಗ ಸೃಷ್ಟಿಸುವುದಕ್ಕೆ ಆದ್ಯತೆ ನೀಡಬೇಕಿದೆ’ ಎಂದು ಹೇಳಿದ್ದಾರೆ.