ನವದೆಹಲಿ[ಮೇ.18]: ಲೋಕಸಭೆ ಚುನಾವಣೆ ಪ್ರಚಾರ ಮುಕ್ತಾಯವಾದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಕಳೆದ 5 ವರ್ಷಗಳಲ್ಲಿ ಎನ್‌ಡಿಎ ಸರ್ಕಾರದ ಸಾಧನೆಗಳನ್ನು ತೆರೆದಿಟ್ಟರು.

ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅಮಿತ್‌ ಶಾ, ‘ಬಿಜೆಪಿ ತನ್ನ ಸ್ವಂತ ಬಲದಿಂದ ಸರ್ಕಾರ ರಚಿಸಲು ಬೇಕಾದ ಸ್ಥಾನಗಳನ್ನು ಗೆಲ್ಲಲಿದೆ. ಚುನಾವಣಾ ಪೂರ್ವ ಮೈತ್ರಿ ಪಕ್ಷಗಳ ಜೊತೆಗೂಡಿ ನಾವು 300ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಲಿದ್ದೇವೆ. ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಆಗಲಿದೆ. ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ’ ಎಂದು ಹೇಳಿದರು.

ಇದೇ ವೇಳೆ ರಫೇಲ್‌ ಒಪ್ಪಂದದ ಬಗ್ಗೆ ಮೋದಿ ಅವರ ವಿರುದ್ಧ ಕೇಳಿ ಬಂದಿರುವ ಆರೋಪಗಳು ಮತ್ತು ಅದಕ್ಕೆ ಮೋದಿ ಅವರು ಮೌನವಾಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅಮಿತ್‌ ಶಾ, ‘ಪ್ರತಿಯೊಂದು ಪ್ರಶ್ನೆಗೂ ಪ್ರಧಾನಿ ಉತ್ತರಿಸಲೇ ಬೇಕು ಎಂದೇನೂ ಇಲ್ಲ ಎಂದು ಹೇಳಿದರು.

ಇದೇ ವೇಳೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರು ಸಂಯುಕ್ತ ರಂಗ ಹುಟ್ಟುಹಾಕುತ್ತಿರುವ ಕುರಿತಾದ ಪ್ರಶ್ನೆಗೆ, ‘ನಾವು ಗೆಲುವು ಸಾಧಿಸುತ್ತೇವೆ ಎಂದು ನಮಗೆ ಸಂಪೂರ್ಣ ವಿಶ್ವಾಸವಿದೆ. ಈ ವ್ಯಕ್ತಿಗಳು ಚುನಾವಣೆ ವೇಳೆ ಯಾವುದೇ ಕೆಲಸ ಮಾಡಿಲ್ಲ. ಹೀಗಾಗಿ ಡ್ರಾಯಿಂಗ್‌ ರೂಮ್‌ನಲ್ಲಿ ಅವರು ಭೇಟಿಯಾಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ಸರ್ಕಾರ ರಚನೆಗೆ ಬೇರೆಯವರ ಸಹಾಯ ಪಡೆಯುತ್ತೀರ ಎಂದು ಕೇಳಿದ ಪ್ರಶ್ನೆಗೆ, ನಮ್ಮ ಕಾರ್ಯಸೂಚಿಯನ್ನು ಒಪ್ಪುವ ಯಾರ ಜೊತೆಗಾದರೂ ಕೈಜೋಡಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.