ಕಾನ್ಪುರ್(ಮಾ.26): ಭಾರತೀಯ ಜನತಾ ಪಕ್ಷವನ್ನು ದೇಶದ ಮನೆ ಮನೆಗೆ ತಲುಪಿಸಿದ ಹಿರಿ ತಲೆಗಳಲ್ಲಿ ಮುರಳಿ ಮನೋಹರ್ ಜೋಷಿ ಕೂಡ ಒಬ್ಬರು. ಅಟಲ್‌ ಬಿಹಾರಿ ವಾಜಪೇಯಿ, ಎಲ್‌ಕೆ ಅಡ್ವಾಣಿ ಅವರಂತ ಘಟಾನುಘಟಿ ನಾಯಕರೊಂದಿಗೆ ಸೇರಿ ಪಕ್ಷವನ್ನು ಜನರ ಮನಸ್ಸಲ್ಲಿ ಅಚ್ಚೊತ್ತುವಂತೆ ಮಾಡಿದ್ದು ಜೋಷಿ ಅವರ ಕೊಡುಗೆ.

ಆದರೆ ಅಡ್ವಾಣಿ ಅವರಂತೆ ಈ ಬಾರಿ ಮುರಳಿ ಮನೋಹರ್ ಜೋಷಿ ಕೂಡ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಉತ್ತರಪ್ರದೇಶದ ಕಾನ್ಪುರ್ ಲೋಕಸಭಾ ಕ್ಚೇತ್ರದ ಸರದಾರ ಮುರಳಿ ಮನೋಹರ್ ಜೋಷಿ ಈ ಬಾರಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಆದರೆ ಜೋಷಿ ಅವರ ಹೇಳಿಕೆಯೊಂದು ಇದೀಗ ಪಕ್ಷಕ್ಕೆ ಮುಜುಗರ ತಂದಿತ್ತಿದೆ.

ಈ ಬಾರಿ ಚುನಾವಣೆಗೆ ಸ್ಪರ್ಧಿಸದಂತೆ ಪಕ್ಷ ತಮಗೆ ಆದೇಶ ನೀಡಿದೆ ಎಂದು ಮುರಳಿ ಮನೋಹರ್ ಜೋಷಿ ಹೇಳಿಕೆ ನೀಡಿದ್ದು, ಈ ಕುರಿತು ಕ್ಷೇತ್ರದ ಜನತೆಗೆ ಬಹಿರಂಗ ಪತ್ರ ಬರೆದಿದ್ದಾರೆ.

ಅಲ್ಲದೇ ಉತ್ತರ ಪ್ರದೇಶದಲ್ಲಿ ಪ್ರಚಾರ ಕೈಗೊಳ್ಳುವ ಪಕ್ಷದ ನಾಯಕರ ಪಟ್ಟಿಯಿಂದ ಕೂಡ ಮುರಳಿ ಮನೋಹರ್ ಜೋಷಿ ಅವರ ಹೆಸರನ್ನು ಕೈಬಿಡಲಾಗಿದೆ. ಮುರಳಿ ಮನೋಹರ್ ಜೋಷಿ ಅವರು ಅಡ್ವಾಣಿ ಬಳಿಕ ಪಕ್ಷದಿಂದ ಟಿಕೆಟ್ ನಿರಾಕರಿಸಲ್ಪಟ್ಟ ಎರಡನೇ ಹಿರಿಯ ನಾಯಕರಾಗಿದ್ದು, ಇದು ಸಹಜವಾಗಿ ಜೋಷಿ ಬೆಂಬಲಿಗರಲ್ಲಿ ಅಸಮಾಧಾನ ಮೂಡಿಸಿದೆ.