ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಸಚಿವ ವೆಂಕಟರಾವ್ ನಾಡಗೌಡ
ಮಹಿಳೆ ಚುನಾವಣೆಗೆ ನಿಲ್ಲುವುದೇ ಒಂದು ದೊಡ್ಡ ಅಪರಾಧ ಎನ್ನುವ ರೀತಿಯಲ್ಲಿ ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಜೆಡಿಎಸ್ ನಾಯಕರು ವೈಯಕ್ತಿಕ ಟೀಕೆಗಳನ್ನು ಮುಂದುವರಿಸಿದ್ದಾರೆ.
ಕೊಪ್ಪಳ, [ಏ.01]: ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಜೆಡಿಎಸ್ ನಾಯಕರು ಒಬ್ಬೊಬ್ಬರಾಗಿಯೇ ನಾಲಿಗೆ ಹರಿಬಿಡುತ್ತಿದ್ದಾರೆ.
ಇದೀಗ ರಾಜ್ಯ ಮೀನುಗಾರಿಕೆ ಮತ್ತು ಪಶುಸಂಗೋಪನಾ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಸುಮಲತಾ ವಿರುದ್ಧ ಕೀಳು ಮಟ್ಟದ ಭಾಷೆ ಉಪಯೋಗಿಸಿದ್ದಾರೆ.
'ಅಂಬರೀಶ್ ಅಂತಿಮ ದರ್ಶನಕ್ಕೆ ಬಂದ ಜನಸಾಗರ ನೋಡಿ ಇವತ್ತು ಚುನಾವಣೆಗೆ ಬಂದಿದ್ದೀರಾ'..?
ಕೊಪ್ಪಳದಲ್ಲಿ ಇಂದು [ಸೋಮವಾರ]ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಾಡಗೌಡ, 'ಸುಮತಲಾಳನ್ನ ಕುಮಾರಸ್ವಾಮಿ ಹತ್ತಿಕ್ಕೋದು ಸಜಹ. ಅದು ರಾಜಕಾರಣ' ಎಂದು ಹೇಳುವ ಮೂಲಕ ಮಂಡ್ಯದಲ್ಲಿ ಜೆಡಿಎಸ್ ನದ್ದೇ ಸರ್ವಾಡಳಿತ ಎನ್ನುವ ಅರ್ಥದಲ್ಲಿ ಹೇಳಿದರು.
ಸುಮಲತಾನ್ನ ಎತ್ತಿ ಮೇಲೆ ಕೂರಿಸಿ ಆಕೆಯನ್ನ ಗೆಲ್ಲಿಸಿ ಎಂದು ಹೇಳೋಕಾಗಲ್ಲ ಎಂದು ಆಕೆ, ಈಕೆ ಅಂತೆಲ್ಲಾ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಮಹಿಳೆಯರಿಗೆ ಗೌರವ ಕೊಡಿ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನಾಡಗೌಡ, ಇದು ನಮ್ಮ ಹಳ್ಳಿ ಭಾಷೆ ಎಂದು ಸಬೂಬು ಹೇಳಿದರು.
'ತಾಕತ್ತಿದ್ರೆ, ಅಪ್ಪನಿಗೆ ಹುಟ್ಟಿದ್ರೆ ಎದುರಿಗೆ ಟೀಕೆ ಮಾಡ್ಲೀ', ತಮ್ಮಣ್ಣನ ಇದೆಂಥಾ ಮಾತು..?
ಹೀಗೆ ತಮ್ಮ ದರ್ಪದ ಮಾತು ಮುಂದುವರಿಸಿದ ನಾಡಗೌಡ, ಕುಮಾರಸ್ವಾಮಿ ಪ್ರಚಾರಕ್ಕೆ ಎಲ್ಲಾ ಕಡೆ ಬರ್ತಾರೆ. ಆದ್ರೆ ದಿನಾಂಕ ಹೇಳಕಾಗಲ್ಲ. ಮಗು ಹುಟ್ಟುತ್ತೆ. ಅದು ಎಂದು ಹುಟ್ಟುತ್ತೆ. ದಿನಾಂಕ ಹೇಳಕ್ಕಾಗಲ್ಲ ಅಂತೆಲ್ಲ ಅಸಭ್ಯವಾಗಿ ಮಾತಾಡಿದರು.
ಜೆಡಿಎಸ್ ಲೀಡರ್ಸ್ ಗಳಾದ ಶ್ರೀಕಂಠೇಗೌಡ ಅವರು ಸುಮಲತಾ ಗೌಡ್ತಿ ಅಲ್ಲ ಎಂದು ಹೇಳಿದ್ದರು. ಇನ್ನು ಗಂಡ ಸತ್ತು ಆರು ತಿಂಗಳಿಗೆ ಚುನಾವಣೆ ಬೇಕಾ? ಎಂದು ಹೇಳಿ ಎಚ್.ಡಿ. ರೇವಣ್ಣ ಹೇಳಿಕೆ ನೀಡಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು.
ಅಷ್ಟೇ ಅಲ್ಲದೇ ಹಾಲಿ ಸಂಸದ ಶಿವರಾಮೇಗೌಡ, ಸಹ ಅಂಬರೀಶ್ ಅಂತಿಮ ದರ್ಶನಕ್ಕೆ ಬಂದ ಜನಸಾಗರ ನೋಡಿ ಚುನಾವಣೆಗೆ ಬಂದಿದ್ದೀರಾ..? ಎಂದು ಹೇಳಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಇವರುಗಳ ಗುಂಪಿಗೆ ಇದೀಗ ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಸೇರಿಕೊಂಡಿದ್ದಾರೆ.
ರಾಜಕಾರಣದಲ್ಲಿ ಆಡಳಿತ ಹಾಗೂ ಪ್ರತಿಪಕ್ಷದವರು ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಗಳು ಮಾಡುವುದು ಸಹಜ. ಆದ್ರೆ ಓರ್ವ ಸಚಿವರಾಗಿ ರೀತಿಯ ಕೀಳುಮಟ್ಟದ ಭಾಷೆ ಬಳಸಿ ಮಾತನಾಡುವುದು ಎಷ್ಟು ಸರಿ..?