ಬಳ್ಳಾರಿ‌: ಲೋಕಸಭಾ ಚುನಾವಣೆಯ ಫಲಿತಾಂಶ ಬಹುತೇಕ ಪ್ರಕಟವಾಗಿದ್ದು, 23 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವಿನ ನಗೆ ಬೀರುತ್ತಿದ್ದಾರೆ.  

ರಾಜ್ಯದಲ್ಲಿ ಕಮಲ ಅರಳುತ್ತಿದ್ದು ಇದೇ ವೇಳೆ ಬಳ್ಳಾರಿಯಲ್ಲಿ ಮಾತನಾಡಿದ ಶ್ರೀ ರಾಮುಲು, ಬಿಜೆಪಿ ಗೆಲುವಿಗೆ ಹರ್ಷಿಸಿದ್ದು, ಮೈತ್ರಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ನಿಂಬೇಕಾಯಿ ರೇವಣ್ಣ ಮಠ ಕಟ್ಟುತ್ತಿದ್ದಾರೆ. ರಾಜ್ಯದ ಜೋಡೆತ್ತುಗಳಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಕುಮಾರಸ್ವಾಮಿ ಮಠ ಸೇರಿಕೊಳ್ಳಲಿ. 

ಮೋದಿ ಮತ್ತೆ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ನೀಡುವುದಾಗಿ ಹೇಳಿದ್ದು, ಹಿಂದೆ ದೇವೇಗೌಡರು ಕೂಡ ಇದೇ ರೀತಿಯಾಗಿ ಹೇಳಿ  ಮಾತು ತಪ್ಪಿದ್ದರು. ಈಗ ರೇವಣ್ಣ ರಾಜೀನಾಮೆ ನೀಡಲಿ. ಮಾತನಾಡಿದಂತೆ ನಡೆದುಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು. 

ರಾಜ್ಯ ಸರ್ಕಾರಕ್ಕೆ ಹೆಚ್ಚು ಆಯಸ್ಸಿಲ್ಲ. ಮೋದಿ ಪ್ರಮಾಣ ವಚನ ಮುಗಿದ ಕೂಡಲೇ ಬಿ.ಎಸ್. ವೈ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ. ಚಿಂಚೋಳಿಯಲ್ಲಿಯೂ ನಾವು ಗೆಲುವು ಪಡೆದಿದ್ದೇವೆ. ಸ್ವತಂತ್ರ ಅಭ್ಯರ್ಥಿಗಳನ್ನೊಳಗೊಂಡಂತೆ ಸರ್ಕಾರ ರಚನೆ ಮಾಡಲು ನಾವು ಸಮರ್ಥರಿದ್ದೇವೆ. 

ನೈತಿಕ ಹೊಣೆ ಹೊತ್ತು  ಮುಖ್ಯಮಂತ್ರಿ ರಾಜೀನಾಮೆ ಕೊಡಲಿ. ನಾವು ಸರ್ಕಾರ ರಚನೆ ಮಾಡುತ್ತೇವೆ. ಬಳ್ಳಾರಿ ಜನ ನಿಮ್ಮನ್ನು ಸೋಲಿಸಿದ್ದಾರೆ. ಡಿಕೆಶಿ, ಸಿದ್ದರಾಮಯ್ಯ ಅವರೇ ನಮ್ಮ ಜಿಲ್ಲೆಯ ಜನರ ಜೋಶ್ ಹೇಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೇ ಮುಂದಿನ 2024ರ ಚುನಾವಣೆಯಲ್ಲಿ ಮೋದಿಯವರೇ ಪ್ರಧಾನಿಯಾಗಲಿದ್ದಾರೆ  ಎಂದು ಶ್ರೀ ರಾಮುಲು ಭರವಸೆಯ ಮಾತನ್ನಾಡಿದ್ದಾರೆ.