ನವದೆಹಲಿ[ಮೇ.21]: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂಬ ಚುನಾವಣೋತ್ತರ ಸಮೀಕ್ಷೆಗಳು ವಿಪಕ್ಷಗಳಲ್ಲಿ ಭಾರೀ ತಲ್ಲಣ ಮೂಡಿಸಿವೆ. ಭಾನುವಾರ ಸಂಜೆ ಬಳಿಕ ಹೊರಟ ಈ ತಲ್ಲಣದ ಅಲೆಗಳು ಸೋಮವಾರ ಬಹುತೇಕ ವಿಪಕ್ಷಗಳ ಕಚೇರಿಯಲ್ಲಿ ಪ್ರತಿಧ್ವನಿಸಿದ್ದು, ರಾಜಕೀಯ ಸಂಚಲನಕ್ಕೂ ಕಾರಣವಾಗಿದೆ.

ಕಾಂಗ್ರೆಸ್‌ ಅಥವಾ ಬಿಜೆಪಿ ಮೈತ್ರಿಕೂಟಕ್ಕೆ ಬಹುಮತ ಸಿಗದು. ಹೀಗಾಗಿ ದೊಡ್ಡ ಪಕ್ಷಗಳು ಸರ್ಕಾರ ರಚನೆಗೆ ಅವಶ್ಯಕವಾದ ಬೆಂಬಲ ಹುಡುಕಿ ನಮ್ಮನ್ನು ಅರಸಿ ಬರಲಿ ಎಂದು ಮುಗುಮ್ಮಾಗಿ ಕುಳಿತಿದ್ದ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ, ಸಮಾಜವಾದಿ ಪಕ್ಷದ ಅಖಿಲೇಶ್‌ಸಿಂಗ್‌ ಯಾದವ್‌, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ಇದೀಗ ದಿಢೀರನೆ ಎಚ್ಚೆತ್ತುಕೊಂಡು ಪರಸ್ಪರ ಸಮಾಲೋಚನೆಗೆ ಮುಂದಾಗಿದ್ದಾರೆ.

ದಿಢೀರ ಸಭೆ:

ಈ ಬಾರಿ ನಮ್ಮ ಬೆಂಬಲವಿಲ್ಲದೇ ಕೇಂದ್ರದಲ್ಲಿ ಸರ್ಕಾರ ರಚನೆಯೇ ಸಾಧ್ಯವಿಲ್ಲ ಎನ್ನುತ್ತಿದ್ದ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಪರಸ್ಪರ ಮಾತುಕತೆ ನಡೆಸಿದ್ದಾರೆ. ಈಗಾಗಲೇ ಉತ್ತರಪ್ರದೇಶದಲ್ಲಿ ಅಧಿಕಾರ ಕಳೆದುಕೊಂಡಿದ್ದ, ಈ ಎರಡೂ ಪಕ್ಷಗಳಿಗೀಗ ಕೇಂದ್ರದ ಸರ್ಕಾರ ರಚನೆಯಲ್ಲೂ ತಮ್ಮ ಪಾತ್ರ ಏನೂ ಇಲ್ಲ ಎಂಬ ಸುದ್ದಿ ಭಾರೀ ಆಘಾತವನ್ನೇ ನೀಡಿದೆ ಎನ್ನಲಾಗಿದೆ. ಎನ್‌ಡಿಎಗೆ ಸಮೀಕ್ಷೆಗಳು 300 ಸ್ಥಾನಗಳನ್ನು ನೀಡಿರುವುದನ್ನು ಈ ನಾಯಕರು ಒಪ್ಪಲು ಸಿದ್ಧರಿಲ್ಲ ಎಂದು ಮೂಲಗಳು ತಿಳಿಸಿವೆ.

ಎಸ್ಪಿ- ಬಿಎಸ್ಪಿ- ಆರ್‌ಎಲ್‌ಡಿ ಗಟಬಂಧನ ಬಿಜೆಪಿಗೆ ಉತ್ತರಪ್ರದೇಶದಲ್ಲಿ ತಕ್ಕಮಟ್ಟಿಗೆ ಹೊಡೆತ ನೀಡಿದೆ ಎಂದು ಸಮೀಕ್ಷೆಗಳು ಹೇಳಿವೆಯಾದರೂ, ಫಲಿತಾಂಶದವರೆಗೂ ಕಾದು ನೋಡಲು ಮಾಯಾವತಿ ನಿರ್ಧರಿಸಿದ್ದಾರೆ. ಆ ಬಳಿಕವಷ್ಟೇ ಅವರು ಮುಂದಿನ ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ. ಹೀಗಾಗಿ ಅಲ್ಲಿವರೆಗೂ ಅವರು ಲಖನೌ ಬಿಟ್ಟು ಬೇರೆ ಕಡೆಗೆ ತೆರಳುವುದಿಲ್ಲ ಎಂದು ಬಿಎಸ್ಪಿ ಮೂಲಗಳು ತಿಳಿಸಿವೆ.

ಸೋನಿಯಾ ಭೇಟಿ ಇಲ್ಲ:

ಇದೇ ಕಾರಣಕ್ಕಾಗಿಯೇ, ಸೋಮವಾರ ದೆಹಲಿಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುವ ಉದ್ದೇಶ ಹೊಂದಿದ್ದ ಮಾಯಾವತಿ ಕಡೆಯ ಗಳಿಗೆಯಲ್ಲಿ ಭೇಟಿಯನ್ನೇ ರದ್ದುಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಅಖಿಲೇಶ್‌ ಯಾದವ್‌ ಕೂಡಾ, ಹೊಸ ರಾಜಕೀಯ ಸನ್ನಿವೇಶದಲ್ಲಿ ಪಕ್ಷ ವಹಿಸಬೇಕಾದ ಪಾತ್ರದ ಬಗ್ಗೆ ತಮ್ಮ ಪಕ್ಷದ ಹಿರಿಯರ ನಾಯಕರ ಜೊತೆ ಸಮಾಲೋಚನೆ ನಡೆಸಿದ್ದಾರೆ.

ನಾಯ್ಡು-ಮಮತಾ ಸಭೆ:

ಈ ನಡುವೆ ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ, ವಿವಿಧ ಪಕ್ಷಗಳ ನಾಯಕರ ಜತೆ ಮಾತುಕತೆ ಆರಂಭಿಸಿದ್ದಾರೆ. ಅತಂತ್ರ ಫಲಿತಾಂಶ ಬಂದರೆ ಏನು ಮಾಡಬೇಕು ಎಂಬ ನಿಟ್ಟಿನಲ್ಲಿ ಸಮಾಲೋಚನೆ ನಡೆಸುತ್ತಿದ್ದಾರೆ. ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರು ಸೋಮವಾರ ಕೋಲ್ಕತಾದಲ್ಲಿ ಮಮತಾ ಅವರನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯ ಸನ್ನಿವೇಶಗಳ ಕುರಿತು ಚರ್ಚೆ ನಡೆಸಿದ್ದಾರೆ.

‘ನಮ್ಮದೇ ಆದ ಆಂತರಿಕ ವರದಿ ಇದೆ. ಪ್ರತಿ ಜಿಲ್ಲೆ ಹಾಗೂ ಕ್ಷೇತ್ರಗಳಿಂದಲೂ ವರದಿ ತರಿಸಿಕೊಂಡಿದ್ದೇವೆ. ಸಮೀಕ್ಷೆಗಳು ಬಹುತೇಕ ಸಂದರ್ಭಗಳಲ್ಲಿ ಹೊಂದಾಣಿಕೆಯಾಗುವುದಿಲ್ಲ. ಬಹುತೇಕ ಸಮೀಕ್ಷೆಗಳು ಆಧಾರರಹಿತವಾಗಿವೆ ಹಾಗೂ ಬಿಜೆಪಿ ಪರ ಪಕ್ಷಪಾತ ಹೊಂದಿವೆ. ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದು ಹಿರಿಯ ನಾಯಕರ ಅಭಿಪ್ರಾಯವಾದರೆ, ಕೆಲವೊಂದು ಸ್ಥಳೀಯ ಘಟಕಗಳು ಇದಕ್ಕೆ ತದ್ವಿರುದ್ಧವಾದ ಮಾತು ಕೇಳಿಬರುತ್ತಿರುವುದು ಅಚ್ಚರಿಗೆ ಕಾರಣವಾಗಿವೆ. ಈ ಬಾರಿ ತೃಣಮೂಲ ಕಾಂಗ್ರೆಸ್‌ ವಿರುದ್ಧ ಆಂತರಿಕವಾಗಿ ಅಲೆ ಇತ್ತು. ಅದನ್ನು ಗ್ರಹಿಸಲು ಪಕ್ಷದ ನಾಯಕತ್ವ ವಿಫಲವಾಯಿತು ಎಂದು ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.