ನನಗೆ ಮತ ಹಾಕದಿದ್ರೆ ಕೆಲಸ ಕೇಳಿ ಬರಬೇಡಿ: ಮುಸ್ಲಿಮರಿಗೆ ಮನೇಕಾ ಗಾಂಧಿ ಎಚ್ಚರಿಕೆ| ಪ್ರತಿಫಲಾಪೇಕ್ಷೆ ಇಲ್ಲದೇ ಏನಾದರೂ ನೀಡಲು ನಾವೇನು ಮಹಾತ್ಮಾ ಗಾಂಧಿ ಮಕ್ಕಳಲ್ಲ| ಮನೇಕಾ ಉಮೇದುವಾರಿಕೆ ರದ್ದು ಮಾಡಿ: ಆಯೋಗಕ್ಕೆ ಕಾಂಗ್ರೆಸ್ ದೂರು
ಸುಲ್ತಾನ್‌ಪುರ[ಏ.13]: ‘ಈ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರು ನನಗೆ ಮತ ಹಾಕಲೇಬೇಕು. ಇಲ್ಲದೇ ಹೋದಲ್ಲಿ ಚುನಾವಣೆ ಗೆದ್ದ ಬಳಿಕ ನಾನು ಅವರ ಯಾವುದೇ ಕೆಲಸವನ್ನು ಮಾಡಿಕೊಡುವುದಿಲ್ಲ’ ಎಂದು ಕೇಂದ್ರ ಸಚಿವೆ ಮನೇಕಾ ಗಾಂಧಿ, ಮುಸ್ಲಿಂ ಮತದಾರರಿಗೆ ಬೆದರಿಕೆ ಹಾಕಿದ ಘಟನೆ ಇಲ್ಲಿ ನಡೆದಿದೆ.
ಮನೇಕಾ ಈ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದ್ದು, ಹೇಳಿಕೆ ಕುರಿತು ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ಅವರ ಉಮೇದುವಾರಿಕೆ ರದ್ದುಗೊಳಿಸಬೇಕು ಎಂದು ಕಾಂಗ್ರೆಸ್, ಎಸ್‌ಪಿ ಮತ್ತು ಬಿಎಸ್‌ಪಿ ನಾಯಕರು ಒತ್ತಾಯಿಸಿದ್ದಾರೆ.
ಸುಲ್ತಾನ್‌ಪುರದಲ್ಲಿ ಮುಸ್ಲಿಮರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಮನೇಕಾ ಗಾಂಧಿ ‘ನಾನು ಈ ಬಾರಿಯೂ ಗೆಲ್ಲುತ್ತಿದ್ದೇನೆ, ಆದರೆ ನನ್ನ ಗೆಲುವಿನಲ್ಲಿ ಮುಸ್ಲಿಮರ ಪಾತ್ರ ಇಲ್ಲದೇ ಹೋದಲ್ಲಿ ಅದು ನನಗೆ ಬೇಸರ ತರಿಸುತ್ತದೆ. ಹೀಗಾಗಿ ನಾನು ಗೆದ್ದ ಬಳಿಕ ಯಾವುದೇ ಮುಸ್ಲಿಮರು ಯಾವುದೇ ಕೆಲಸಕ್ಕಾಗಿ ನನ್ನ ಬಳಿ ಬಂದರೆ, ನಾನು ನಿಮಗೆ ಕೆಲಸ ಮಾಡಿಕೊಡದೇ ಹೋದರೆ ಏನೂ ಆಗದು ಎಂಬ ಭಾವನೆ ನನ್ನಲ್ಲಿ ಮೂಡುವುದು ಖಚಿತ. ಯಾಕೆಂದರೆ ಉದ್ಯೋಗ ಚೌಕಾಸಿಯ ವಿಷಯ ಅಲ್ಲವೇ ಅಲ್ಲ, ಹೌದೋ? ಅಲ್ಲವೋ? ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಏನಾನ್ನದರೂ ನೀಡಲು ನಾವೇನು ಮಹಾತ್ಮಾ ಗಾಂಧೀಜಿಯ ಮಕ್ಕಳಲ್ಲ. ನಾನು ನಿಮ್ಮತ್ತ ಸ್ನೇಹದ ಹಸ್ತ ಚಾಚುತ್ತಿದ್ದೇನೆ. ನನ್ನ ಹಿಂದಿನ ಕ್ಷೇತ್ರ ಪೀಲಿಭೀತ್‌ನಲ್ಲಿ ಯಾರನ್ನಾದರೂ ನೀವು ನನ್ನ ಕೆಲಸದ ಬಗ್ಗೆ ಕೇಳಿನೋಡಿ. ನಾನು ಈಗಾಗಲೇ ಚುನಾವಣೆ ಗೆದ್ದಾಗಿದೆ. ಮುಂದಿನದ್ದು ನಿಮಗೆ ಬಿಟ್ಟಿದ್ದು’ ಎಂದು ಎಚ್ಚರಿಕೆಯ ಧಾಟಿಯಲ್ಲಿ ಮಾತನಾಡಿದ್ದಾರೆ.
ಮನೇಕಾ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಈ ಹೇಳಿಕೆ ನಿಜಕ್ಕೂ ಆಘಾತಕಾರಿಯಾಗಿದೆ. ಈ ಹೇಳಿಕೆ ಬಗ್ಗೆ ಜನ ತಮ್ಮ ಮತಗಳ ಮೂಲಕವೇ ಉತ್ತರ ನೀಡಲಿದ್ದಾರೆ ಎಂದು ಹೇಳಿದೆ.
