ಮಂಡ್ಯ/ಮದ್ದೂರು: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಉತ್ಸುಕರಾಗಿರುವ ಸುಮಲತಾ ಅಂಬರೀಷ್‌ ಅವರನ್ನು ಗೆಲ್ಲಿಸಲು ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಚಲುವರಾಯಸ್ವಾಮಿ ಚುನಾವಣಾ ಕಾರ್ಯತಂತ್ರವನ್ನು ಗೌಪ್ಯವಾಗಿ ನಡೆಸುತ್ತಿದ್ದಾರೆ ಎನ್ನಲಾಗಿದೆ. 

ಮದ್ದೂರಿನ ಕಾಂಗ್ರೆಸ್‌ ನಾಯಕ ಜಗದೀಶ್‌ ನಿವಾಸದಲ್ಲಿ ನಾಗಮಂಗಲ, ಮದ್ದೂರು ವ್ಯಾಪ್ತಿಯ ಕಾಂಗ್ರೆಸ್‌ ಮುಖಂಡರು ಹಾಗೂ ವೆಂಕಟೇಶ್ವರ ರೆಸಿಡೆನ್ಸಿ ಹೋಟೆಲ್‌ನಲ್ಲಿ ಕೊಪ್ಪ ಭಾಗದ ಹಲವು ಕಾಂಗ್ರೆಸ್‌ ಮುಖಂಡರ ಸಭೆ ನಡೆಸಿ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರನ್ನು ಬೆಂಬಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. 

ಚಲುವರಾಯಸ್ವಾಮಿ ನಿರ್ಧಾರಕ್ಕೆ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಮುಖಂಡರು, ಕಾರ್ಯಕರ್ತರೆಲ್ಲರೂ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ ಎಂಬ ವಿಷಯ ತಿಳಿದುಬಂದಿದೆ. ಈ ಚುನಾವಣೆ ನಮಗೆ ಪ್ರತಿಷ್ಠೆಯಾಗಿದೆ. ರಾಜಕೀಯ ಅಸ್ತಿತ್ವ ಕಾಪಾಡಿಕೊಳ್ಳುವುದಕ್ಕೆ ಸುಮಲತಾ ಗೆಲುವು ನಮಗೆ ಅನಿವಾರ್ಯವಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಸುಮಲತಾ ಬೆಂಬಲಕ್ಕೆ ನಿಲ್ಲಬೇಕು ಎಂದು ಸೂಚನೆ, ಸಂದೇಶ ರವಾನೆ ಮಾಡಿದ್ದಾರೆಂದು ತಿಳಿದುಬಂದಿದೆ.