Asianet Suvarna News Asianet Suvarna News

ಅಂಬಿ ಅಂಕಲ್‌ ಇದ್ದಿದ್ರೆ ನನ್ನ ಪರ ಮತ ಕೇಳ್ತಿದ್ರು : ನಿಖಿಲ್

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಮೊದಲ ಬಾರಿಗೆ ನೇರವಾಗಿ ಲೋಕಸಭೆ ಪ್ರವೇಶಿಸಲು ಸಜ್ಜಾಗಿ ಮಂಡ್ಯದಿಂದ ಜೆಡಿಎಸ್‌ ಅಭ್ಯರ್ಥಿಯಾಗಿದ್ದಾರೆ. ಯಾವಾಗ ಸುಮಲತಾ ಅಂಬರೀಷ್‌ ಇಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬುದು ನಿರ್ಧಾರವಾಯಿತೊ ಅಲ್ಲಿಂದಾಚೆಗೆ ಮಂಡ್ಯ ಕ್ಷೇತ್ರ ರಣರಂಗವಾಗಿ ಮಾರ್ಪಟ್ಟಿದೆ. ಭರ್ಜರಿ ಪ್ರಚಾರದ ನಡುವೆಯೇ  ವಿಶೇಷ ಸಂದರ್ಶನ ನೀಡಿದ ನಿಖಿಲ್‌ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿ ನೇರವಾಗಿಯೇ ಮಾತನಾಡಿದ್ದಾರೆ.

Mandya Lok Sabha JDS Candidate Nikhil Kumaraswamy interview
Author
Bengaluru, First Published Mar 21, 2019, 7:45 AM IST

ಬೆಂಗಳೂರು :  ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತಿಹೆಚ್ಚು ಕುತೂಹಲ ಕೆರಳಿಸಿರುವುದು ಸಕ್ಕರೆ ನಾಡು ಮಂಡ್ಯ ಕ್ಷೇತ್ರ. ಅದಕ್ಕೆ ಕಾರಣ ಮುಖ್ಯಮಂತ್ರಿಗಳ ಪುತ್ರ ಹಾಗೂ ಮಾಜಿ ಪ್ರಧಾನಿಯ ಮೊಮ್ಮಗ ಇಲ್ಲಿಂದ ಕಣಕ್ಕಿಳಿದಿರುವುದು, ಅವರಿಗೆ ಖ್ಯಾತ ನಟ ದಿವಂಗತ ಅಂಬರೀಷ್‌ ಅವರ ಪತ್ನಿ ಎದುರಾಳಿಯಾಗಿರುವುದು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಮೊದಲ ಬಾರಿಗೆ ನೇರವಾಗಿ ಲೋಕಸಭೆ ಪ್ರವೇಶಿಸಲು ಸಜ್ಜಾಗಿ ಮಂಡ್ಯದಿಂದ ಜೆಡಿಎಸ್‌ ಅಭ್ಯರ್ಥಿಯಾಗಿದ್ದಾರೆ. ಯಾವಾಗ ಸುಮಲತಾ ಅಂಬರೀಷ್‌ ಇಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬುದು ನಿರ್ಧಾರವಾಯಿತೊ ಅಲ್ಲಿಂದಾಚೆಗೆ ಮಂಡ್ಯ ಕ್ಷೇತ್ರ ರಣರಂಗವಾಗಿ ಮಾರ್ಪಟ್ಟಿದೆ. ಭರ್ಜರಿ ಪ್ರಚಾರದ ನಡುವೆಯೇ ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿದ ನಿಖಿಲ್‌ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿ ನೇರವಾಗಿಯೇ ಮಾತನಾಡಿದ್ದಾರೆ.

ಬಹಳ ಸಣ್ಣ ವಯಸ್ಸಿನಲ್ಲೇ ನೀವು ಲೋಕಸಭೆ ಪ್ರವೇಶಿಸಲು ಮುಂದಾಗಿದ್ದೀರಿ?

ಇದು ನನ್ನ ವೈಯಕ್ತಿಕ ನಿರ್ಧಾರ ಅಲ್ಲ, ಪಕ್ಷದ ನಿರ್ಧಾರ. ಮಂಡ್ಯ ಜಿಲ್ಲೆಯ ಹಾಗೂ ಕ್ಷೇತ್ರದ ಎಲ್ಲ ಹಂತದ ಮುಖಂಡರು ಸೇರಿ ತೆಗೆದುಕೊಂಡ ತೀರ್ಮಾನ. ನಾನು ಎಲ್ಲೋ ಒಂದು ಕಡೆ ನನ್ನ ಪಾಡಿಗೆ ಚಲನಚಿತ್ರರಂಗದಲ್ಲಿ ಮುಂದುವರೆದಿದ್ದೆ. ಪಕ್ಷದ ಮುಖಂಡರಿಗೆ ಇದು ಸರಿಯಾದ ಸಮಯ ಎಂದು ಅನಿಸಿದೆ. ಹೀಗಾಗಿ ನಾನು ಸಕ್ರಿಯ ರಾಜಕಾರಣಕ್ಕೆ ಬರುತ್ತಿದ್ದೇನೆ.

ನಿಮ್ಮ ತಂದೆ ಕುಮಾರಸ್ವಾಮಿ ಅವರು ಕೂಡ ಮೊದಲ ಬಾರಿಗೆ ನೇರವಾಗಿ ಲೋಕಸಭೆಗೆ ಪ್ರವೇಶಿಸಿದರು. ನೀವು ಸಹ ತಂದೆಯ ಹಾದಿಯನ್ನೇ ತುಳಿಯುತ್ತಿದ್ದೀರಿ?

ಇದೆಲ್ಲ ವಿಧಿ. ನಾವು ಏನೋ ಅಂದುಕೊಂಡಿರುತ್ತೇವೋ ಅದೆಲ್ಲ ಆಗುವುದಿಲ್ಲ. ಆದರೆ, ಈಗಿನ ಬೆಳವಣಿಗೆ ಬಗ್ಗೆ ನಾನು ಸಂತೋಷವಾಗಿದ್ದೇನೆ.

ಸಾಮಾನ್ಯವಾಗಿ ರಾಜಕಾರಣಕ್ಕೆ ಬರುವವರು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಲು ಬಯಸುತ್ತಾರೆ. ಆದರೆ, ನಿಮ್ಮನ್ನು ಲೋಕಸಭೆಗೆ ತಳ್ಳುತ್ತಿದ್ದಾರೆ ಎಂದು ಅನಿಸಿಲ್ಲವೇ?

ಹಾಗೇನಿಲ್ಲ. ಯಾರೂ ನನ್ನನ್ನು ತಳ್ಳುತ್ತಿಲ್ಲ. ಸ್ವಲ್ಪ ಜವಾಬ್ದಾರಿಯಿದೆ. ಅದನ್ನು ನನ್ನ ಹೆಗಲ ಮೇಲೆ ಇರಿಸಿಕೊಂಡು ನಿಭಾಯಿಸುತ್ತೇನೆ. ನಾನು ರಾಜಕಾರಣದ ಬಗ್ಗೆ ಕನಸು ಕಂಡವನೇ ಅಲ್ಲ. ನನ್ನ ಇತ್ತೀಚಿನ ಚಲನಚಿತ್ರ ‘ಸೀತಾರಾಮ ಕಲ್ಯಾಣ’ಕ್ಕೆ ಉತ್ತಮ ಪ್ರತಿಕ್ರಿಯೆ ಬಂತು. ಅದಕ್ಕೆ ನಾನು ಸಂತೃಪ್ತನಾಗಿದ್ದೆ. ಚಲನಚಿತ್ರ ರಂಗಕ್ಕೆ ಸೀಮಿತನಾಗಿದ್ದೆ. ಆದರೆ, ಲೋಕಸಭೆಗೆ ಕಣಕ್ಕಿಳಿಸಲು ದೊಡ್ಡವರು ಸೇರಿ ತೀರ್ಮಾನಿಸಿದರು. ಆಯಿತು ಎಂದು ಒಪ್ಪಿಕೊಂಡೆ.

ಮಂಡ್ಯದಿಂದ ಸ್ಪರ್ಧಿಸಬೇಕು ಎಂಬುದು ನಿನ್ನೆ ಮೊನ್ನೆಯ ನಿರ್ಧಾರವಲ್ಲ. ನಿಮ್ಮ ‘ಜಾಗ್ವಾರ್‌’ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಮಂಡ್ಯದಲ್ಲಿ ಮಾಡಿದ್ದೇ ನಿಮ್ಮನ್ನು ಕಣಕ್ಕಿಳಿಸಬೇಕು ಎಂಬ ಉದ್ದೇಶದಿಂದ ಎಂಬ ಮಾತಿದೆ?

ಇಲ್ಲ..ಇಲ್ಲ. ಜಾಗ್ವಾರ್‌ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದ ದೃಶ್ಯಗಳನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟುಟ್ರೋಲ್‌ ಮಾಡಿದರು. ಆ ಕಾರ್ಯಕ್ರಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳನ್ನು ಕರೆದು ಅವರಿಗೆ ಧನಸಹಾಯ ಮಾಡಿದ್ದೆ. ಆದರೆ, ಅದನ್ನು ಯಾರೂ ಹೇಳಲಿಲ್ಲ. ಆಗ ಮುಂದೆ ಮಂಡ್ಯದಿಂದ ಕಣಕ್ಕಿಳಿಯುತ್ತೇನೆ ಎಂಬುದು ನನ್ನ ಮನಸ್ಸಿನಲ್ಲಿಯೂ ಇರಲಿಲ್ಲ. ಇದೆಲ್ಲವೂ ಪಕ್ಷದ ತೀರ್ಮಾನ. ತಂದೆ ಕುಮಾರಸ್ವಾಮಿ ಅವರು ಹಿಂದೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ವೇಳೆ ಮಂಡ್ಯದಿಂದ ನಾಲ್ಕು ಶಾಸಕರು ಚುನಾಯಿತರಾಗಿದ್ದರು. ಈ ಬಾರಿ ಮಂಡ್ಯದ ಏಳಕ್ಕೆ ಏಳು ಕ್ಷೇತ್ರಗಳಲ್ಲೂ ಜೆಡಿಎಸ್‌ ಗೆಲುವು ಸಾಧಿಸಿದೆ. ಈ ಎರಡು ಕಾರಣಕ್ಕಾಗಿ ಮಂಡ್ಯಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇವೆ.

ನಿಖಿಲ್‌ ಹಾಗೂ ಪ್ರಜ್ವಲ್‌ ರೇವಣ್ಣ ಚುನಾವಣೆಗೆ ಇಳಿದಿರುವುದರಿಂದ ಈಗ ರಾಜ್ಯಾದ್ಯಂತ ಕುಟುಂಬ ರಾಜಕಾರಣದ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಸಾಕಷ್ಟುಟೀಕೆ ಟಿಪ್ಪಣೆ ಕೇಳಿಬರುತ್ತಿವೆ?

ಕುಟುಂಬ ರಾಜಕಾರಣ ಎಲ್ಲಿಲ್ಲ ಹೇಳಿ? ಪ್ರತಿಯೊಂದು ಪಕ್ಷದಲ್ಲೂ ಇದೆ. ದೊಡ್ಡ ಮಟ್ಟದಲ್ಲಿ, ಚಿಕ್ಕ ಮಟ್ಟದಲ್ಲಿ ಎಲ್ಲೆಡೆ ಇದೆ. ಡಾಕ್ಟರ್‌ ಮಗ ಡಾಕ್ಟರ್‌, ಶಿಕ್ಷಕನ ಮಗ ಶಿಕ್ಷಕ, ಎಂಜಿನಿಯರ್‌ ಮಗ ಎಂಜಿನಿಯರ್‌ ಆದರೆ ತಪ್ಪಿಲ್ಲ ಎಂದ ಮೇಲೆ ರಾಜಕಾರಣಿಯ ಮಗ ರಾಜಕಾರಣಿ ಆಗುವುದಲ್ಲಿ ತಪ್ಪೇನಿದೆ? ಆದರೆ, ಮುಂದೆ ನಾವು ಜನರ ಜೊತೆ ಹೇಗೆ ನಡೆದುಕೊಳ್ಳುತ್ತೇವೆ, ಹೇಗೆ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂಬುದು ಮುಖ್ಯ. ಅಂತಿಮವಾಗಿ ಜನರಿಗೆ ನಾನು ಇಷ್ಟವಾಗಬೇಕು. ಆಗ ಸಹಜವಾಗಿಯೇ ಕುಟುಂಬ ರಾಜಕಾರಣದ ಟೀಕೆ ತಾನಾಗಿಯೇ ಅಳಿಸಿ ಹೋಗುತ್ತದೆ ಎಂಬುದು ನನ್ನ ಅಚಲವಾದ ನಂಬಿಕೆ.

ಸಕ್ರಿಯ ರಾಜಕಾರಣಕ್ಕೆ ಬಂದಿರುವುದರಿಂದ ಇನ್ನು ಮುಂದೆ ಚಿತ್ರರಂಗದಲ್ಲಿ ನಟರಾಗಿ ಗಂಭೀರವಾಗಿ ಮುಂದುವರೆಯುವುದು ಅನುಮಾನ ಇದ್ದಂತಿದೆ?

ನಾನು ಹುಡುಗಾಟ ಮಾಡುವುದಕ್ಕಾಗಿ ರಾಜಕೀಯಕ್ಕೆ ಬಂದಿಲ್ಲ. ಇಷ್ಟುದಿನ ಚುನಾವಣೆ ಬಂದಾಗ ಸಣ್ಣಪುಟ್ಟಕೆಲಸ ಮಾಡಿದ್ದೆ. ಆದರೆ, ಮಂಡ್ಯದಿಂದ ಗೆದ್ದ ಬಳಿಕ ನನ್ನ ಜವಾಬ್ದಾರಿ ನೂರು ಪಟ್ಟು ಹೆಚ್ಚಾಗಲಿದೆ. ಇಷ್ಟುದಿನ ಚಿತ್ರರಂಗ ನನ್ನ ಮೊದಲ ಆದ್ಯತೆಯ ವೃತ್ತಿಯಾಗಿತ್ತು. ಇನ್ನು ಮುಂದೆ ರಾಜಕಾರಣವೇ ನನ್ನ ಮೊದಲ ಆದ್ಯತೆಯ ವೃತ್ತಿ. ನಂತರ ಚಿತ್ರರಂಗದಲ್ಲೂ ಮುಂದುವರೆಯಬಹುದು. ನಾನು ಲೋಕಸಭಾ ಸದಸ್ಯನಾಗಿ ಮೆರೆಯುವುದಕ್ಕಾಗಿ ರಾಜಕೀಯಕ್ಕೆ ಬಂದಿಲ್ಲ. ಅದೊಂದು ಗುರುತು ಅಷ್ಟೆ. ಜನಗಳ ಮಧ್ಯೆ ಇರಬೇಕು, ಜನರಿಗಾಗಿ ಏನಾದರೂ ಮಾಡಬೇಕು ಎಂಬ ಹುಚ್ಚು ಅಂಟಿಸಿಕೊಂಡಿದ್ದೇನೆ. ಮೊದಲಿಗೆ ನಾನು ಹೀಗಿರಲಿಲ್ಲ.

ನಿಮಗೆ ರಾಜಕಾರಣ ರಕ್ತಗತವಾಗಿ ಬಂದಿರುವಂತಿದೆ?

ಇವತ್ತಲ್ಲ ನಾಳೆ ರಾಜಕಾರಣಕ್ಕೆ ಬರುತ್ತೇನೆ ಎಂಬುದು ಮನಸ್ಸಿನಲ್ಲಿತ್ತು. ಆದರೆ, ಇಷ್ಟುಬೇಗ ಬರುತ್ತೇನೆ ಎಂದುಕೊಂಡಿರಲಿಲ್ಲ. ಎಲ್ಲ ಭಗವಂತನ ಇಚ್ಛೆ. ಜೊತೆಗೆ ರಾಜಕಾರಣ ರಕ್ತಗತವಾಗಿ ಬಂದಿರುವುದೂ ನಿಜ. ತಂದೆ ಮತ್ತು ತಾತನ ರಾಜಕಾರಣದ ಪಟ್ಟುಗಳನ್ನು ಸಮೀಪದಿಂದ ಗಮನಿಸಿಕೊಂಡು ಬೆಳೆದಿದ್ದೇನೆ.

ತಂದೆಯ ಆರೋಗ್ಯ ಸೂಕ್ಷ್ಮವಾಗಿರುವುದರಿಂದ ರಾಜಕಾರಣಕ್ಕೆ ಬರುತ್ತಿದ್ದೀರಿ ಎಂಬ ಮಾತನ್ನು ನಿಮ್ಮ ತಾತ ದೇವೇಗೌಡರು ಹೇಳಿದ್ದರ ಮರ್ಮ ಏನು?

ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗಬಾರದು. ತಂದೆಯವರ ಆರೋಗ್ಯ ಚೆನ್ನಾಗಿದೆ. ಚೆನ್ನಾಗಿಯೇ ಇರುತ್ತಾರೆ. ಅದರ ಬಗ್ಗೆ ಯಾರಿಗೂ ಅನುಮಾನವೇ ಬೇಡ. ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದವರು ಅನೇಕರಿದ್ದಾರೆ. ಆದರೆ, ತಂದೆಯವರ ಕೆಲಸದ ಒತ್ತಡದಿಂದಾಗಿ ನಮಗೆಲ್ಲರಿಗೂ ಸ್ವಲ್ಪ ಆತಂಕ ಉಂಟಾಗುತ್ತದೆ ಅಷ್ಟೆ. ಅವರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಿದ್ದಾರೆ.

ಹಾಸನದಲ್ಲಿ ದೇವೇಗೌಡರು ಸೇರಿದಂತೆ ಎಲ್ಲರೂ ಕಣ್ಣೀರು ಹಾಕಿದರು? ಆ ಬಗ್ಗೆ ಡ್ರಾಮಾ ಇತ್ಯಾದಿ ಸಾಕಷ್ಟುಚರ್ಚೆ, ಟೀಕೆ ಕೇಳಿಬಂತು?

ನೋಡಿ ಹಾಸನದಲ್ಲಿ ದೇವೇಗೌಡರು ಸುಮಾರು 60 ವರ್ಷಗಳ ಕಾಲ ರಾಜಕಾರಣ ಮಾಡಿದವರು. ಅನೇಕ ಹಂತದ ಜನಪ್ರತಿನಿಧಿಗಳಾಗಿ ಕೆಲಸ ಮಾಡಿದವರು. ಅವರಿಗೆ ಅಂಥದ್ದೊಂದು ಒಡನಾಟ ಇರುವುದರಿಂದ ಸಹಜವಾಗಿ ಕಣ್ಣೀರು ಬಂದಿದೆ. ಅದರಲ್ಲಿ ನಾಟಕ ಮಾಡುವ ಅಗತ್ಯವೇನಿದೆ ಹೇಳಿ. ಅವರನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇವೆ ಎಂಬ ಕಾರಣಕ್ಕೆ ಇನ್ನುಳಿದವರೂ ಭಾವೋದ್ವೇಗಕ್ಕೆ ಒಳಗಾಗಿದ್ದರು. ಚುನಾವಣೆ ವೇಳೆ ಟೀಕೆ ಟಿಪ್ಪಣಿ ಸಹಜ. ಅದನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಬಾರದು.

ನಿಮ್ಮ ಪಕ್ಷದ ಭದ್ರಕೋಟೆ ಎಂಬ ಕಾರಣಕ್ಕಾಗಿ ಮಂಡ್ಯ ಎಂಬ ಸುರಕ್ಷಿತ ಕ್ಷೇತ್ರವನ್ನು ನೀವು ಆಯ್ಕೆ ಮಾಡಿಕೊಂಡಿದ್ದೀರಂತೆ?

ಇದು ನನ್ನ ನಿರ್ಧಾರವಲ್ಲ. ಪಕ್ಷದ ತೀರ್ಮಾನ. ನಾನು ಇಲ್ಲೇ ಕಣಕ್ಕಿಳಿಯಬೇಕು ಅಥವಾ ಅಲ್ಲೇ ಕಣಕ್ಕಿಳಿಯಬೇಕು ಎಂಬುದು ನನ್ನ ತಲೆಯಲ್ಲಿ ಇರಲಿಲ್ಲ. ಬೇರೆ ಕಡೆ ಸ್ಪರ್ಧಿಸಬೇಕು ಎಂದಿದ್ದರೂ ಒಪ್ಪುತ್ತಿದ್ದೆ. ಆದರೆ, ಮಾಧ್ಯಮಗಳಲ್ಲಿ ಪದೇ ಪದೇ ಬರುತ್ತಿದ್ದ ವದಂತಿಗಳ ಪಾತ್ರವೂ ಇದರಲ್ಲಿದೆ. ಸುಮಲತಾ ಅಂಬರೀಷ್‌ ಅವರು ಚುನಾವಣೆಗೆ ಸ್ಪರ್ಧಿಸುವುದರಿಂದ ಕುಮಾರಸ್ವಾಮಿ ಅವರು ಆತಂಕಕ್ಕೆ ಒಳಗಾಗಿದ್ದಾರೆ ಎಂಬಿತ್ಯಾದಿ ಕೆಣಕುವ ಸುದ್ದಿಗಳು ನಮ್ಮನ್ನು ಮತ್ತಷ್ಟುಗಟ್ಟಿಗೊಳಿಸಿದವು. ಜೊತೆಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ರೊಚ್ಚಿಗೆಬ್ಬಿಸಿದವು.

ನಿಮ್ಮ ದೊಡ್ಡಪ್ಪನ ಮಗ ಪ್ರಜ್ವಲ್‌ ರೇವಣ್ಣನಿಗೆ ಸ್ಪರ್ಧೆ ನೀಡುವ ಸಂಬಂಧ ನೀವು ಹಟಕ್ಕೆ ಬಿದ್ದು ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದಿರಂತೆ?

ಇದು ಶುದ್ಧ ಸುಳ್ಳು. ನಾನು ಆಗಲೇ ಹೇಳಿದಂತೆ ಪಕ್ಷ ಮತ್ತು ಪಕ್ಷದ ನಾಯಕರ ತೀರ್ಮಾನದಂತೆ ಸ್ಪರ್ಧಿಸಲು ಮುಂದಾಗಿದ್ದೇನೆ. ಇದೊಂದು ರೀತಿ ಸಿನಿಮಾ ಇದ್ದಂತೆ. ನನಗೊಂದು ಪಾತ್ರ ಕೊಟ್ಟಿದ್ದಾರೆ. ಆ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುವುದು ನನ್ನ ಜವಾಬ್ದಾರಿ. ಪ್ರಜ್ವಲ್‌ ನನ್ನ ತಮ್ಮ. ನನಗಿಂತ ಎರಡು ವರ್ಷ ಚಿಕ್ಕವನು. ಇವತ್ತು ನಾನು ಮತ್ತು ಪ್ರಜ್ವಲ್‌ ಸೇರಿ ಪಕ್ಷ ಕಟ್ಟಬೇಕಾಗಿದೆ. ನಮ್ಮಿಬ್ಬರ ಮಧ್ಯೆ ಯಾವುದೇ ಕಾಂಪಿಟೇಷನ್‌ ಇಲ್ಲ, ಹಟ ಇಲ್ಲ.

ನೀವು ಮಂಡ್ಯದ ಅಳಿಯ ಆಗುತ್ತೀರಿ ಎಂಬ ಮಾತನ್ನು ನಾಗಮಂಗಲದ ಶಾಸಕ ಸುರೇಶ್‌ಗೌಡರು ಸಮಾವೇಶದಲ್ಲೇ ಹೇಳಿದರು. ಈಗಾಗಲೇ ಹುಡುಗಿ ನೋಡಿದ್ದೀರಾ ಹೇಗೆ?

ಅಯ್ಯೋ.. ನನಗೆ ಗೊತ್ತಿಲ್ಲ. ಯಾರಾದರೂ ಒಳ್ಳೆಯ ಹುಡುಗಿ, ಒಳ್ಳೆಯ ಕುಟುಂಬ ಸಿಕ್ಕರೆ ಮದುವೆಯಾಗುತ್ತೇನೆ. ಆವತ್ತು ಸಮಾವೇಶದಲ್ಲಿ ಹೇಳಿದಾಗ ನಾವೆಲ್ಲ ಮುಖ ಮುಖ ನೋಡಿಕೊಂಡೆವು. ಅದನ್ನು ಬಿಟ್ಟರೆ ಅದೇನೂ ಗಂಭೀರ ವಿಚಾರ ಅಲ್ಲ.

ಜೆಡಿಎಸ್‌ ಪಕ್ಷ ಇಷ್ಟುದಿನ ಅಪ್ಪ ಮಕ್ಕಳ ಪಕ್ಷ ಎಂಬ ಹೆಸರು ಗಳಿಸಿತ್ತು. ಇನ್ನು ಮುಂದೆ ಅಪ್ಪ ಮಕ್ಕಳ ಹಾಗೂ ಮೊಮ್ಮಕ್ಕಳ ಪಕ್ಷ ಎಂಬ ಹಣೆಪಟ್ಟಿಅಂಟಿಕೊಳ್ಳಬಹುದಲ್ಲ?

ನಮ್ಮ ಕಾರ್ಯಕರ್ತರು ಸಂತೋಷವಾಗಿದ್ದಾರೆ. ಅವರು ನಮ್ಮನ್ನು ಬಯಸುತ್ತಾರೆ. ಇವತ್ತು ಜೆಡಿಎಸ್‌ ಪಕ್ಷ ಉಳಿದಿದ್ದರೆ ಅದು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ದುಡಿಮೆಯಿಂದಾಗಿ. ನಮ್ಮ ಕಾರ್ಯಕರ್ತರು ಪ್ರಶ್ನಿಸಿದರೆ ಅದಕ್ಕೆ ತಲೆಕೆಡಿಸಿಕೊಳ್ಳುತ್ತೇನೆ. ನಮ್ಮ ಜೆಡಿಎಸ್‌ ಪಕ್ಷ ಎಂದರೆ ನಮ್ಮ ಕುಟುಂಬ. ನಮ್ಮ ಮನೆ ಇದ್ದಂತೆ. ನಮ್ಮ ಪಕ್ಷದ ಕಾರ್ಯಕರ್ತರೆಲ್ಲರೂ ಕುಟುಂಬದ ಸದಸ್ಯರು. ಅವರು ಸಂತೋಷವಾಗಿರುವಾಗ ಬೇರೆಯವರು ಏನು ಹೇಳಿದರೂ ಅದಕ್ಕೆ ಬೆಲೆ ಇಲ್ಲ.

ನಿಮ್ಮನ್ನು ಲೋಕಸಭಾ ಅಭ್ಯರ್ಥಿಯನ್ನಾಗಿಸುವ ಉದ್ದೇಶದಿಂದಲೇ ಕುಮಾರಸ್ವಾಮಿ ಅವರು ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಮಂಡ್ಯಕ್ಕೆ ಅತಿಹೆಚ್ಚು ಅನುದಾನ ನೀಡಿದ್ದು ಸರಿಯೇ?

ಮಂಡ್ಯ ಹಿಂದುಳಿದ ಜಿಲ್ಲೆ. ಹೀಗಾಗಿ ಇಲ್ಲಿ ಹೆಚ್ಚು ಅಭಿವೃದ್ಧಿಯಾಗಲಿ ಎಂಬ ಕಾರಣಕ್ಕಾಗಿ ಸ್ವಲ್ಪ ಹೆಚ್ಚು ಅನುದಾನ ನೀಡಿರಬಹುದೇ ಹೊರತು ಬೇರೆ ಯಾವ ಉದ್ದೇಶದಿಂದಲೂ ಅಲ್ಲ. ಇತರ ಅನೇಕ ಜಿಲ್ಲೆಗಳಿಗೂ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ.

ಸಕ್ರಿಯ ರಾಜಕೀಯದಲ್ಲಿ ಹೆಚ್ಚು ಅನುಭವ ಇಲ್ಲದಿದ್ದರೂ ಒಮ್ಮೆಲೇ ನಿಮಗೆ ಲೋಕಸಭಾ ಟಿಕೆಟ್‌ ಸಿಕ್ಕಿದೆಯಲ್ಲ? ಅನುಭವ ಉಳ್ಳವರು ಅನೇಕರಿದ್ದರಲ್ಲ?

ನನಗೆ ರಾಜಕೀಯದಲ್ಲಿ ಅನುಭವ ಕಡಿಮೆ ಇರಬಹುದು. ಕುಮಾರಸ್ವಾಮಿ ಅವರು 2006ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗಲೂ ಅನೇಕ ಟೀಕೆಗಳು ಕೇಳಿಬಂದವು. ಹಿಂಬಾಗಿಲ ಮೂಲಕ ಬಂದು ಮುಖ್ಯಮಂತ್ರಿಗಳಾದರು ಎಂಬ ಮಾತು ಬಂತು. ಅವರು ಮೊದಲ ಬಾರಿಗೆ ಶಾಸಕರಾಗಿದ್ದರು. ಅದಕ್ಕೂ ಮೊದಲು ಒಮ್ಮೆ ಸಂಸದರಾಗಿದ್ದರು. ಆಗಲೂ ಅನುಭವದ ಕೊರತೆ ಪ್ರಸ್ತಾಪವಾಯಿತು. ಆದರೆ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿ ಮಾಡಿದ ಕೆಲಸ, ಸಾಧನೆಗಳನ್ನು ನೋಡಿದ ನಂತರ ಆ ಟೀಕೆಗಳು ಬಂದ್‌ ಆದವು. ಇವತ್ತು ನನ್ನ ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ.

ಈ ಬಾರಿಯ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣ ಹೆಚ್ಚು ಕ್ರಿಯಾಶೀಲವಾಗಿದೆ. ನಿಮ್ಮ ವಿರುದ್ಧ ‘ಗೋ ಬ್ಯಾಕ್‌ ನಿಖಿಲ್‌’ ಎಂಬ ಅಭಿಯಾನ ಕೂಡ ಜೋರಾಗಿಯೇ ನಡೆಯಿತು?

ಇಂದಿನ ರಾಜಕಾರಣದಲ್ಲಿ ಇದೆಲ್ಲ ವಿರೋಧಿಗಳ ತಂತ್ರಗಳು. ಎಲ್ಲೋ ಕುಳಿತು ಸಾಮಾಜಿಕ ಜಾಲತಾಣದಲ್ಲಿ ಗೋ ಬ್ಯಾಕ್‌ ಅಂತ ಹೇಳಬಹುದು. ಅದು ಅವರವರ ಸಮಾಧಾನಕ್ಕಾಗಿ ಮಾತ್ರ. ಅಂತಿಮವಾಗಿ ಜನರೇ ತೀರ್ಪು ನೀಡಲಿದ್ದಾರೆ. ಟೀಸರ್‌ ನೋಡಿ ಒಂದು ಚಿತ್ರದ ಬಗ್ಗೆ ನಿರ್ಧಾರಕ್ಕೆ ಬರಬಾರದು. ಚಿತ್ರ ಬಿಡುಗಡೆಯಾದ ಮೇಲೆಯೇ ಅದರ ಬಗ್ಗೆ ಸ್ಪಷ್ಟವಾಗಿ ಹೇಳಬಹುದು. ಆದರೆ, ಎಲ್ಲೋ ಒಂದು ಕಡೆ ಈ ಟೀಕೆಗಳಿಂದಾಗಿ ಮನಸ್ಸಿಗೆ ಬೇಸರವಾಗುತ್ತದೆ. ಈ ಮಟ್ಟಕ್ಕೆ ಇಳಿಯುತ್ತಾರಲ್ಲ ಅನಿಸುತ್ತದೆ. ನನಗಷ್ಟೇ ಅಂತ ಅಲ್ಲ. ಯಾರಿಗೂ ಆ ರೀತಿ ಹೇಳಬಾರದು. ನಮ್ಮಿಂದ ತಪ್ಪಾಗಿದ್ದರೆ ನಿರ್ದಿಷ್ಟವಾಗಿ ಹೇಳಲಿ. ನಾನು ಗೆದ್ದ ಬಳಿಕ ಸರಿಯಾಗಿ ಕೆಲಸ ಮಾಡದಿದ್ದರೆ ಮಂಡ್ಯದ ಜನರು ಬಂದು ಕೇಳಲಿ. ಮಂಡ್ಯದ ಜನರಿಗೆ ಆ ಅಧಿಕಾರವಿದೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಮಾಡುವವರು ಮಂಡ್ಯದವರಲ್ಲ. ಹೊರಗೆ ಕುಳಿತವರು. ಹೀಗಾಗಿ, ಅದರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಅದಕ್ಕೆ ನನ್ನ ಬಳಿ ಸಮಯವೂ ಇಲ್ಲ.

ಹಾಗಾದರೆ ನಿಮ್ಮ ಪ್ರಕಾರ ಸಾಮಾಜಿಕ ಜಾಲತಾಣದಲ್ಲಿ ನಡೆಯುವ ಅಭಿಯಾನಗಳಿಗೆ ಮಹತ್ವ ಕೊಡಬೇಕಾಗಿಲ್ಲವೇ? ಅವುಗಳು ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲವೇ?

ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಕೀಳುಮಟ್ಟದಲ್ಲಿ ಕ್ರಿಯಾಶೀಲವಾಗಿರುವವರು ‘ಸ್ಯಾಡಿಸ್ಟ್‌’ಗಳು. ಇವೆಲ್ಲವೂ ಸಾಮಾನ್ಯ ಜನರಿಗೆ ತಲುಪುವುದಿಲ್ಲ. ನಾವೂ ಈ ರೀತಿ ಚೀಪ್‌ ಗಿಮಿಕ್‌ ಮಾಡಬಹುದು. ಆದರೆ, ನಮಗೆ ಅದರ ಅಗತ್ಯವಿಲ್ಲ.

ಮಂಡ್ಯದಲ್ಲಿ ನಿಮ್ಮ ಮತ್ತು ಸುಮಲತಾ ಅಂಬರೀಷ್‌ ನಡುವೆ ಜಿದ್ದಾಜಿದ್ದಿಯ ಸ್ಪರ್ಧೆ ಏರ್ಪಟ್ಟಿದೆ?

ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿಂದ ಬೇಕಾದರೂ ಸ್ಪರ್ಧಿಸಬಹುದು. ಅದನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ನಾನು ಅವರನ್ನು ಸ್ವಾಗತಿಸುತ್ತೇನೆ. ಜಿದ್ದಾಜಿದ್ದಿ ಎನ್ನುವುದಕ್ಕಿಂತ ನಾನು ಜೆಡಿಎಸ್‌ ಅಭ್ಯರ್ಥಿಯಾಗಿ ಜನರ ಬಳಿ ಮತಯಾಚಿಸುತ್ತಿದ್ದೇನೆ. ನಮ್ಮ ಬಗ್ಗೆ ಹೇಳುತ್ತೇನೆಯೇ ಹೊರತು ಸುಮಲತಾ ಅಂಬರೀಷ್‌ ಅವರ ಬಗ್ಗೆ ಅಲ್ಲ.

ನೀವು ಮತ್ತು ಕುಮಾರಸ್ವಾಮಿ ಅವರು ಅಂಬರೀಷ್‌ ಅವರೊಂದಿಗೆ ಸಾಕಷ್ಟುಒಡನಾಟ ಹೊಂದಿದ್ದಿರಿ. ಇದೀಗ ಅವರ ಕುಟುಂಬದ ವಿರುದ್ಧ ಸ್ಪರ್ಧಿಸುವ ಸನ್ನಿವೇಶ ಎದುರಾಗಿದೆ?

ಪ್ರಾಮಾಣಿಕವಾಗಿ ಹೇಳುತ್ತೇನೆ, ಇಂದಿನ ಸನ್ನಿವೇಶವನ್ನು ನಾನು ಕನಸು ಮನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ. ಇದು ಕಠಿಣ ಪರಿಸ್ಥಿತಿ. ಇವತ್ತು ಏನೇ ನಡೆಯುತ್ತಿದ್ದರೂ ಅಂಬರೀಷ್‌ ಅವರ ಬಗ್ಗೆ ನನಗೆ ಮತ್ತು ನನ್ನ ತಂದೆಯವರಿಗೆ ಇರುವ ಗೌರವ-ಪ್ರೀತಿ ಯಾವತ್ತೂ ಕಡಮೆಯಾಗುವುದಿಲ್ಲ. ಯಾರು ಎಷ್ಟೇ ಭಿನ್ನಾಭಿಪ್ರಾಯ ಸೃಷ್ಟಿಮಾಡಿದರೂ ನಮಗೆ ಅವರ ಬಗ್ಗೆ ಇರುವ ಭಾವನೆ ಹಾಗೆಯೇ ಇರಲಿದೆ. ಅದು ಬೇಷರತ್‌ ಪ್ರೀತಿ. ಕಳೆದ ವಿಧಾನಸಭೆ ಚುನಾವಣೆಯ ನಂತರದ ರಾಜಕೀಯ ಬೆಳವಣಿಗೆ ಬಹಳ ಜನರಿಗೆ ಗೊತ್ತಿಲ್ಲ. ಬಹುಶಃ ಅಂಬಿ ಅಂಕಲ್‌ ಇದ್ದಿದ್ದರೆ ನನ್ನ ಪರವಾಗಿ ಮತ ಕೇಳುತ್ತಿದ್ದರು. ಅಲ್ಲದೇ, ಅಂಬರೀಷ್‌ ಅವರ ಮಗ ಅಭಿಷೇಕ್‌ ಯಾವತ್ತಿಗೂ ನನ್ನ ಸ್ನೇಹಿತ. ರಾಜಕಾರಣ ಬೇರೆ. ಸ್ನೇಹ ಸಂಬಂಧ ಬೇರೆ. ಆದರೆ, ಈಗ ನಾವು ಚುನಾವಣೆ ಎಂಬ ಯುದ್ಧದಲ್ಲಿ ಇದ್ದೇವೆ. ಯುದ್ಧ ಮುಗಿದ ಬಳಿಕ ಮತ್ತೆ ಎಂದಿನಂತೇ ಇರುತ್ತೇವೆ.

ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್‌ ಮತ್ತು ಕಾಂಗ್ರೆಸ್‌ನಲ್ಲಿ ಮೇಲ್ಮಟ್ಟದಲ್ಲಿ ಹೊಂದಾಣಿಕೆಯಾಗಿದ್ದರೂ ಸ್ಥಳೀಯವಾಗಿ ಮಂಡ್ಯದಲ್ಲಿ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್‌ ಪರವಾಗಿ ಕೆಲಸ ಮಾಡುತ್ತಿಲ್ಲವಲ್ಲ?

ನಾನು ಮೈತ್ರಿ ಪಕ್ಷದ ಅಭ್ಯರ್ಥಿ. ನಾನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದೇನೆ. ಆ ಜವಾಬ್ದಾರಿ ನನ್ನ ಮೇಲಿದೆ. ಎಲ್ಲರೂ ನನ್ನ ಪರವಾಗಿ ಕೆಲಸ ಮಾಡುವ ವಿಶ್ವಾಸವಿದೆ.

ಸಮಲತಾ ಅಂಬರೀಷ್‌ ಪರವಾಗಿ ದರ್ಶನ್‌ ಮತ್ತು ಯಶ್‌ರಂಥ ಖ್ಯಾತ ನಟರು ಪ್ರಚಾರ ಆರಂಭಿಸಿದ್ದಾರೆ. ಇದು ನಿಮಗೆ ನಷ್ಟತರಬಹುದೇ?

ಯಾರು ಯಾರ ಪರವಾಗಿ ಬೇಕಾದರೂ ಕೆಲಸ ಮಾಡಲಿ. ಅದರ ಬಗ್ಗೆ ನನ್ನ ಆಕ್ಷೇಪಣೆಯಾಗಲಿ ಅಥವಾ ಟಿಪ್ಪಣಿಯಾಗಲಿ ಇಲ್ಲ. ನಾನು ಮತ್ತು ನಮ್ಮ ಪಕ್ಷದವರು ಜನರ ಬಳಿ ಹೋಗಿ ಮನವೊಲಿಸುವ ಪ್ರಯತ್ನ ಮಾಡುತ್ತೇವೆ.

ಮಂಡ್ಯ ಜನರು ನಿಮಗೇ ಯಾಕೆ ಮತ ನೀಡಬೇಕು?

ಹಿಂದೆ 1996ರಲ್ಲಿ ಕುಮಾರಸ್ವಾಮಿ ಅವರು ದೇವೇಗೌಡರ ಮಗ ಎಂಬ ಕಾರಣಕ್ಕಾಗಿ ಮತ ಹಾಕಿ ಎಂದು ಕೇಳಿ ಗೆದ್ದರು. ಅವತ್ತು ನಂಬಿಕೆ ಇಟ್ಟು ಗೆಲ್ಲಿಸಿದ್ದಕ್ಕಾಗಿ ಇವತ್ತು ಕುಮಾರಸ್ವಾಮಿ ಏನೇನು ಅಭಿವೃದ್ಧಿ ಕೆಲಸಗಳನ್ನು ಮಾಡಿದರು, ಅವರ ಮಹತ್ವ ಏನು ಎಂಬುದು ಗೊತ್ತಾಗಿದೆ. ಅದು ಈಗ ನನ್ನ ವಿಷಯದಲ್ಲೂ ಅನ್ವಯಿಸುತ್ತದೆ.

ಕುಟುಂಬ ರಾಜಕಾರಣ ಬಗ್ಗೆ ಏನು ಹೇಳುತ್ತೀರಿ?

ಡಾಕ್ಟರ್‌ ಮಗ ಡಾಕ್ಟರ್‌, ಶಿಕ್ಷಕನ ಮಗ ಶಿಕ್ಷಕ, ಎಂಜಿನಿಯರ್‌ ಮಗ ಎಂಜಿನಿಯರ್‌ ಆದರೆ ತಪ್ಪಿಲ್ಲ ಎಂದಾದರೆ, ರಾಜಕಾರಣಿಯ ಮಗ ರಾಜಕಾರಣಿ ಆಗುವುದರಲ್ಲಿ ತಪ್ಪೇನಿದೆ? ಆದರೆ, ಮುಂದೆ ನಾವು ಜನರ ಜತೆ ಹೇಗಿರುತ್ತೇವೆ? ಹೇಗೆ ಅಭಿವೃದ್ಧಿ ಮಾಡುತ್ತೇವೆ? ಎಂಬುದು ಮುಖ್ಯ. ಜನರಿಗೆ ಇಷ್ಟವಾದರೆ ಕುಟುಂಬ ರಾಜಕಾರಣ ಟೀಕೆ ತಾನಾಗಿಯೇ ಅಳಿಸಿ ಹೋಗುತ್ತದೆ.

ವರದಿ :  ವಿಜಯ್‌ ಮಲಗಿಹಾಳ

Follow Us:
Download App:
  • android
  • ios