ಮಂಡ್ಯ(ಮಾ.19): ಹೇಳಿ ಕೇಳಿ ಇದು ಚುನಾವಣಾ ಸಮಯ. ಲೋಕಸಭೆ ಚುನಾವಣೆಯ ಕಾವು ಇಡೀ ದೇಶವನ್ನು ಆವರಿಸಿದೆ. ಹಳ್ಳಿಯಿಂದ ದಿಲ್ಲಿಯವರೆಗೂ ಎಲ್ಲಿ ನೋಡಿದರೂ ಈಗ ಕೇವಲ ಚುನಾವಣೆಯದ್ದೇ ಮಾತು.

ಅದರಲ್ಲೂ ಭಾರೀ ಕುತೂಹಲ ಮೂಡಿಸಿರುವ ಮಂಡ್ಯ ಲೋಕಸಭೆ ಕ್ಷೇತ್ರದ ಕುರಿತು ಮಂಡ್ಯ ಏನು ಇಡೀ ಇಂಡಿಯಾವೇ ಮಾತನಾಡುತ್ತಿದೆ. ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ನಡುವಿನ ಮತ ಕಾಳಗ ನವದೆಹಲಿಯಲ್ಲೂ ಚರ್ಚೆಗೊಳಪಟ್ಟಿದೆ.

ಭಾರತದ ಪ್ರಜಾಪ್ರಭುತ್ವದ ಹಬ್ಬ ಎಂದೇ ಪರಿಗಣಿಸಲ್ಪಡುವ ಸಾರ್ವತ್ರಿಕ ಚುನಾವಣೆ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ. ಬಸ್ ನಿಲ್ದಾಣ, ಆಸ್ಪತ್ರೆ, ಗ್ರಂಥಾಲಯ, ಮನೆ ಮುಂದಿನ ಕಟ್ಟೆ, ಹೊಟೇಲ್ ಹೀಗೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಜನ ಇದೀಗ ಮಾತನಾಡುತ್ತಿರುವುದು ಚುನಾವಣೆ ವಿಷಯವನ್ನೇ.

ಆದರೆ ಮಂಡ್ಯದ ವಾದಿರಾಜ್ ಕಾಫಿ ಶಾಪ್ ಮಾಲೀಕ ಮಾತ್ರ ಇದಕ್ಕೆ ಅಪವಾದ. ತಮ್ಮ ಕ್ಯಾಂಟೀನ್‌ನಲ್ಲಿ ಧೂಮಪಾನ ನಿಷೇಧಿಸಿದೆ ಎಂಬ ಒಕ್ಕಣಿಕೆ ಕೆಳಗೆ ರಾಜಕೀಯ ಚರ್ಚೆ ನಿಷೇಧಿಸಿದೆ ಎಂದು ಬರೆದಿದ್ದಾರೆ ವಾದಿರಾಜ್.

ಹೌದು, ನಗರದದಲ್ಲಿರುವ ವಾದಿರಾಜ್ ಕಾಫಿ ಶಾಪ್ ಇದೀಗ ಜನರ ಆಕರ್ಷಣೆಯ ಸ್ಥಳವಾಗಿ ಮಾರ್ಪಟ್ಟಿದೆ. ಕಾರಣ ಈ ಹೊಟೇಲ್ ನಲ್ಲಿ ರಾಜಕೀಯ ಚರ್ಚೆ ಬೇಡ ನಿಶ್ಚಿಂತೆಯಿಂದ ಕಾಫಿ ಕುಡಿದು ನೆಮ್ಮದಿಯಿಂದ ಹೊರಡಿ ಎಂದು ಬರೆಯಲಾಗಿದೆ.