ಬೆಂಗಳೂರು[ಮಾ.14]: ಶ್ವಾಸಕೋಶ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಸವ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಅವರು ಕಳೆದ ಏಳು ದಿನಗಳಿಂದ ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಗೆ ಮಾತೆ ಮಹಾದೇವಿ ಅವರು ಸ್ಪಂದಿಸುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಕಳೆದ ನಾಲ್ಕು ದಿನಗಳಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನೂ ಎರಡು ದಿನ ಚಿಕಿತ್ಸೆ ಮುಂದುವರೆಸಲಾಗುವುದು. ಡೈಯಾಲಿಸಿಸ್‌ ಕೊಳವೆ ಬದಲಾವಣೆ ಮಾಡಿರುವುದರಿಂದ ಸ್ವಲ್ಪ ಬಳಲಿದ್ದಾರೆ. ದ್ರವರೂಪದ ಆಹಾರ ಸೇವನೆ ಮಾಡುತ್ತಿದ್ದಾರೆ. ಒಂದು ವರ್ಷದಿಂದ ಮೂತ್ರಪಿಂಡ ವಿಫಲವಾಗಿದ್ದು, ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದರು ಎಂದು ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ದೀಲಿಪ್‌ ಬಸಮುರಗಿ ಮಾಹಿತಿ ನೀಡಿದ್ದಾರೆ.

ಬುಧವಾರ ಮಣಿಪಾಲ್‌ ಆಸ್ಪತ್ರೆಗೆ ಗೃಹ ಸಚಿವ ಎಂ.ಬಿ.ಪಾಟೀಲ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಅಶೋಕ ಖೇಣಿ, ನಿಜಗುಣಾನಂದ ಶ್ರೀಗಳು ಸೇರಿದಂತೆ ಹಲವರು ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದರು.