ಮೇಠಿ[ಮೇ.23]: ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಲು ಕೆಲವೇ ಗಂಟೆಗಳು ಬಾಕಿ ಇವೆ. ಈಗಾಗಲೇ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ದೇಶದ ಜನರ ಚಿತ್ತ ಇಂದಿನ ಫಲಿತಾಂಶದ ಮೇಲೆ ನೆಟ್ಟಿದೆ. ಈಗಾಗಲೇ ಆರಂಭಿಕ ಟ್ರೆಂಡ್ ಹೊರ ಬಿದ್ದಿದೆ. ಇದರ ಅನ್ವಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸಿಹಿ, ಕಹಿ ಎರಡೂ ಸಿಕ್ಕಿದೆ.

ಈ ಬಾರಿ ರಾಹುಲ್ ಗಾಂಧಿ ಕೇರಳದ ವಯನಾಡು ಹಾಗೂ ಉತ್ತರ ಪ್ರದೆಶದ ಅಮೇಠಿಯಲ್ಲಿ ಸ್ಪರ್ಧಿಸಿದ್ದರು. ಆದರೀಗ ಆರಂಭಿಕ ಟ್ರೆಂಡ್ ಗಮನಿಸಿದರೆ, ಕೇರಳದ ವಯನಾಡಿನಲ್ಲಿ ಮುನ್ನಡೆ ಸಾಧಿಸಿದರೆ, ಅಮೇಠಿಯಲ್ಲಿ ಹಿನ್ನಡೆಯಾಗಿದೆ. ರಾಹುಲ್ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ, ಮುನ್ನಡೆ ಕಾಯ್ದುಕೊಂಡಿದ್ದಾರೆ. ಇದು ಆರಂಭಿಕ ಟ್ರೆಂಡ್ ಆಗಿದ್ದು, ಇದೇ ಮುಂದುವರೆಯುತ್ತಾ ಅಥವಾ ಟ್ರೆಂಡ್ ಬದಲಾಗುತ್ತಾ ಕಾದು ನೋಡಬೇಕಷ್ಟೇ.

ದೆಹಲಿ ಗದ್ದುಗೆ ಹಿಡಿಯಬೇಕಾದರೆ, ಉತ್ತರ ಪ್ರದೇಶದ ಮತದಾರರು ಕೈ ಹಿಡಿಯಬೇಕಾದುದು ಬಹಳ ಮುಖ್ಯ. ಬರೋಬ್ಬರಿ 71 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ, ಕಳೆದ ಚುನಾವಣೆಯಲ್ಲಿ BJPಯಿಂದ 71 ಮಂದಿಯನ್ನು ಆರಿಸಿ ಸಂಸತ್ತಿಗೆ ಕಳುಹಿಸಿತ್ತು. ಇತರ ರಾಷ್ಟ್ರೀಯ/ ಪ್ರಮುಖ ಪಕ್ಷಗಳನ್ನು ಒಂದಂಕಿಗೆ ಕಟ್ಟಿಹಾಕಿತ್ತು. ಮುಲಾಯಂ ನೇತೃತ್ವದ ಸಮಾಜವಾದಿ ಪಕ್ಷವು (SP) 5, ಕಾಂಗ್ರೆಸ್ ಪಕ್ಷವು 2, ಹಾಗೂ ಅಪ್ನಾ ದಳವು 2 ಸ್ಥಾನಗಳನ್ನು ಗಳಿಸಿತ್ತು. ಮಾಯವತಿ ನೇತೃತ್ವದ ಬಹುಜನ ಪಾರ್ಟಿಯು ಒಂದೇ ಒಂದು ಸ್ಥಾನ ಗಳಿಸದೇ ಹೀನಾಯವಾಗಿ ಸೋತಿತ್ತು. ಬಳಿಕ, 2017ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಜಯಭೇರಿ ಬಾರಿಸಿದೆ. 403 ಸದಸ್ಯಬಲದ ವಿಧಾನಸಭೆಯಲ್ಲಿ BJPಯು 312, SPಯು 47, BSPಯು 19, ಅಪ್ನಾ ದಳವು [ಸೋನಿಲಾಲ್] 9 ಮತ್ತು ಕಾಂಗ್ರೆಸ್ ಪಕ್ಷವು 7 ಸೀಟುಗಳನ್ನು ಪಡೆದಿವೆ. ಆದರೆ, ಈ ಲೋಕಸಭೆ ಚುನಾವಣೆಯಲ್ಲಿ ಪರಮಶತ್ರುಗಳಾಗಿದ್ದ SP ಮತ್ತು BSP ಕೈಜೋಡಿಸಿರುವುದು, ಯಾವ ರೀತಿಯ ಫಲಿತಾಂಶವನ್ನು ನೀಡಲಿದೆ ಎಂದು ಇನ್ನಷ್ಟೇ ತಿಳಿಯಬೇಕು