ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರ ದಿಂದ ಸ್ಪರ್ಧೆಗಿಳಿಯುವ ಸಂಬಂಧ ಮಾಜಿ ಸಚಿವ ಎ. ಮಂಜು ಅವರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆ ಯಾಗುವುದು ಬಹುತೇಕ ಖಚಿತವಾಗಿದೆ. ಮಂಜು ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಆಗಿ ಮಾತುಕತೆ ನಡೆಸಿದ್ದು, ಪಕ್ಷ ಸೇರ್ಪಡೆಗೆ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. 

ಹೀಗಾಗಿ, ಭಾನುವಾರ ನಡೆಯುವ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಹಾಸನದಿಂದ ಮಂಜು ಅವರ ಹೆಸರನ್ನು ಅಂತಿಮಗೊಳಿಸಿ ದೆಹಲಿಗೆ ಕಳುಹಿಸಿಕೊಡಲಾಗುವುದು. ಸೋಮವಾರ ಪಕ್ಷದ ಅಭ್ಯರ್ಥಿಗಳ ಪಟ್ಟಿ ಹೊರಬೀಳುವ ಮೊದಲೇ ಪಕ್ಷ ಸೇರ್ಪಡೆಯಾಗುವ ಸಂಭವವಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. 

ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಆಗಿರುವ ಸ್ಥಾನ ಹೊಂದಾಣಿಕೆ ಅನುಸಾರ ಹಾಸನ ಕ್ಷೇತ್ರ ಜೆಡಿಎಸ್ ಪಾಲಾಗಿದೆ. ಆದರೆ, ಹಾಸನ ಕ್ಷೇತ್ರದಿಂದ ಹಾಲಿ ಸಂಸದರೂ ಆಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೇ ಸ್ಪರ್ಧಿಸಬೇಕು. ಅವರ ಮೊಮ್ಮಗ ಪ್ರಜ್ವಲ್ ಅಭ್ಯರ್ಥಿಯಾದಲ್ಲಿ ತಾವು ವಿರೋಧಿಸುವುದಾಗಿ ಮಂಜು ಹೇಳಿದ್ದರು. ಆದರೆ, ಇದೀಗ ಪ್ರಜ್ವಲ್ ರೇವಣ್ಣ ಅವರನ್ನೇ ಅಭ್ಯರ್ಥಿಯನ್ನಾಗಿ ಎರಡು ದಿನಗಳ ಹಿಂದಷ್ಟೇ ಘೋಷಿಸಲಾಯಿತು. 

ಹೀಗಾಗಿ, ಮಂಜು ಅವರು ಬಿಜೆಪಿಯತ್ತ ಮುಖ ಮಾಡುವ ನಿರ್ಧಾರ ಕೈಗೊಂಡರು ಎನ್ನಲಾಗಿದೆ. ಹಾಗೆ ನೋಡಿದರೆ ಆರಂಭದಲ್ಲಿ  ಬಿಜೆಪಿಯಿಂದಲೇ ರಾಜಕಾರಣ ಆರಂಭಿಸಿದ್ದ ಮಂಜು ಅವರು ನಂತರದ ದಿನಗಳಲ್ಲಿ ಕಾಂಗ್ರೆಸ್‌ಗೆ ಕಡೆ ವಾಲಿದ್ದರು. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದರು.