ನವದೆಹಲಿ[ಮಾ.25]: ಈ ಬಾರಿಯ ಲೋಕಸಭೆ ಚುನಾವಣೆಗೆ ಚುನಾವಣಾ ಆಯೋಗವು 26 ಲಕ್ಷ ಬಾಟಲ್‌ ಅಳಿಸಲಾಗದ ಶಾಯಿಯನ್ನು ಖರೀದಿಸಲಿದೆ. ಈ ಶಾಯಿ ತಯಾರಿಸುವ ಏಕೈಕ ಕಂಪನಿಯಾದ ಮೈಸೂರಿನಲ್ಲಿರುವ ಕರ್ನಾಟಕ ಸರ್ಕಾರಿ ಸ್ವಾಮ್ಯದ ಮೈಸೂರ್‌ ಪೇಂಟ್ಸ್‌ ಆ್ಯಂಡ್‌ ವಾರ್ನಿಷ್‌ ಲಿ.ಗೆ ಶಾಯಿ ಪೂರೈಸುವಂತೆ ಚುನಾವಣಾ ಆಯೋಗ ಬೇಡಿಕೆ ಸಲ್ಲಿಸಿದೆ.

‘26 ಲಕ್ಷ ಶಾಯಿ ಬಾಟಲ್‌ಗೆ ಬೇಡಿಕೆ ಬಂದಿದೆ. ಇದು ಕಳೆದ ಚುನಾವಣೆಗಿಂತ 4.5 ಲಕ್ಷ ಬಾಟಲಿಯಷ್ಟುಹೆಚ್ಚು. 2014ರ ಲೋಕಸಭೆ ಚುನಾವಣೆಯಲ್ಲಿ 21.5 ಲಕ್ಷ ಬಾಟಲಿಯನ್ನು ಚುನಾವಣಾ ಆಯೋಗ ಖರೀದಿಸಿತ್ತು. ಈ ಬಾರಿಯ ವ್ಯವಹಾರದ ಮೊತ್ತ ಸುಮಾರು 33 ಕೋಟಿ ರು. ಆಗಲಿದೆ’ ಎಂದು ಮೈಸೂರ್‌ ಪೇಂಟ್ಸ್‌ ಆ್ಯಂಡ್‌ ವಾರ್ನಿಷ್‌ ಲಿ.ನ ಕಾರ್ಯನಿರ್ವಾಹಕ ನಿರ್ದೇಶಕ ಚಂದ್ರಶೇಖರ್‌ ದೊಡ್ಡಮನಿ ತಿಳಿಸಿದ್ದಾರೆ.

1962ರಲ್ಲಿ ಕೇಂದ್ರ ಚುನಾವಣಾ ಆಯೋಗವು ಮೈಸೂರ್‌ ಪೇಂಟ್ಸ್‌ ಜೊತೆ ಅಳಿಸಲಾಗದ ಶಾಯಿ ಪೂರೈಕೆಗೆ ಒಪ್ಪಂದ ಮಾಡಿಕೊಂಡಿತ್ತು. ಅಂದಿನಿಂದಲೂ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಗಳಿಗೆ ಈ ಕಂಪನಿಯೇ ಶಾಯಿ ಪೂರೈಸುತ್ತಿದೆ.

26 ದೇಶಗಳಿಗೆ ರವಾನೆ

ಮೈಸೂರು ಪೇಂಟ್ಸ್‌, ಕೇವಲ ಭಾರತೀಯ ಚುನಾವಣಾ ಆಯೋಗಕ್ಕೆ ಮಾತ್ರವಲ್ಲದೇ ಅಮೆರಿಕ ಸೇರಿದಂತೆ ವಿಶ್ವದ 26 ದೇಶಗಳಿಗೆ ಅಳಿಸಲಾಗದ ಇಂಕ್‌ ಅನ್ನು ಪೂರೈಸುತ್ತಿದೆ.

1937ರಲ್ಲಿ ಸ್ಥಾಪನೆ

ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಅರಸರು 1937ರಲ್ಲಿ ಈ ಇಂಕ್‌ ಉತ್ಪಾದಿಸುವ ಕಾರ್ಖಾನೆಯನ್ನು ಆರಂಭಿಸಿದ್ದರು.

1962ರಲ್ಲಿ ಮೊದಲು

1962ರಲ್ಲಿ ಲೋಕಸಭೆಗೆ ನಡೆದ ಮೂರನೇ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಮೈಸೂರು ಪೇಂಟ್ಸ್‌ನ ಇಂಕ್‌ ಬಳಸಲಾಗಿತ್ತು. ಅಲ್ಲಿಂದ ಸತತವಾಗಿ ಚುನಾವಣಾ ಆಯೋಗವು ಅದೇ ಇಂಕ್‌ ಬಳಸುತ್ತಿದೆ.

ಪೆನ್‌ ಕೂಡಾ ಬಂದಿದೆ

ಮೊದಲಿನಿಂದಲೂ ಬಾಟಲ್‌ನಲ್ಲಿದ್ದ ಇಂಕ್‌ ಅನ್ನು ಸಣ್ಣ ಕಡ್ಡಿಯ ಮೂಲಕ ಮತದಾರರ ಉಗುರಿಗೆ ಹಚ್ಚಲಾಗುತ್ತಿತ್ತು. ಆದರೆ ಚುನಾವಣಾ ಸಿಬ್ಬಂದಿ ಕೆಲಸ ಸುಲಭ ಮಾಡುವ ಸಲುವಾಗಿ ಪೆನ್‌ ರೂಪದಲ್ಲೂ ಬಿಡುಗಡೆ ಮಾಡಲಾಗಿದೆ.