ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಲೇವಡಿ ಮಾಡಿದ ಬಿಜೆಪಿ. 8 ತಿಂಗಳ ಆಡಳಿತಕ್ಕೆ ಕಮಲ ಪಡೆಯಿಂದ ಹೊಸ ವ್ಯಾಖ್ಯಾನ. ತಿರುಗೇಟು ನೀಡುವುದರಲ್ಲಿ ನಾವೇನು ಕಮ್ಮಿಯಿಲ್ಲವೆಂಬಂತೆ ಪಂಚ್ ನೀಡಿದ ಜೆಡಿಎಸ್

ಬೆಂಗಳೂರು: ಲೋಕಸಭಾ ಚುನಾವಣೆಯ ದಿನಾಂಕಗಳು ಪ್ರಕಟವಾಗುತ್ತಿದ್ದಂತೆ, ರಾಜಕೀಯ ಪಕ್ಷಗಳು ಪರಸ್ಪರ ಕೆಸರೆರಚಾಟ ಶುರು ಮಾಡಿವೆ. ಮೊದಲು ವೇದಿಕೆಗಳಿಗೆ ಸೀಮಿತವಾಗಿದ್ದ ವಾಕ್ಸಮರ, ಡಿಜಿಟಲ್ ಯುಗದಲ್ಲಿ ಸೋಶಿಯಲ್ ಮೀಡಿಯಾಕ್ಕೂ ಕಾಲಿಟ್ಟಿದೆ.

ಸಿಎಂ ಕುಮಾರಸ್ವಾಮಿ ಸರ್ಕಾರವನ್ನು ಟೀಕಿಸಿ ಬಿಜೆಪಿ ಮಾಡಿರುವ ಟ್ವೀಟ್‌ಗೆ ಜೆಡಿಎಸ್ ಕೂಡಾ ಅದೇ ಧಾಟಿಯಲ್ಲಿ ತಿರುಗೇಟು ನೀಡಿದೆ.

ಟ್ವೀಟ್ ಒಂದರಲ್ಲಿ, ಕುಮಾರಸ್ವಾಮಿ ಸರ್ಕಾರದ ಕಾರ್ಯವೈಖರಿಗೆ ಹೊಸ ವ್ಯಾಖ್ಯಾನ ನೀಡಿರುವ ಬಿಜೆಪಿ, ಕುಂಟುಂಬ ರಾಜಕಾರಣವನ್ನು ಲೇವಡಿ ಮಾಡಿದೆ.

ಮೊದಲೆರಡು ತಿಂಗಳು ಸರ್ಕಾರ ರಚಿಸೋದು ಹೇಗೆ?, ಮುಂದಿನ ಎರಡು ತಿಂಗಳು ಚುನಾವಣೆಯಲ್ಲಿ ಪತ್ನಿಯನ್ನು ಗೆಲ್ಲಿಸೋದು ಹೇಗೆ? ಮತ್ತೆರಡು ತಿಂಗಳು ಪುತ್ರನ ಸಿನಿಮಾವನ್ನು ಪ್ರಮೋಟ್ ಮಾಡೋದು ಹೇಗೆ?, ಹಾಗೂ ಇನ್ನೆರಡು ತಿಂಗಳು ಮಗನನ್ನು ಮಂಡ್ಯದಿಂದ ಗೆಲ್ಲಿಸೋದು ಹೇಗೆ? ಒಟ್ಟಾರೆಯಾಗಿ ಕುಟುಂಬದ ಬೇಕುಬೇಡಗಳನ್ನು ಪೂರೈಸುವುದರಲ್ಲೇ ಎಚ್‌ಡಿಕೆ ಕಾಲ ಕಳೆದದ್ದಾಯ್ತು ಎಂದು ಟಾಂಗ್ ನೀಡಿತ್ತು.

Scroll to load tweet…


ಬಿಜೆಪಿ ಟ್ವೀಟ್‌ಗೆ ತಿರುಗೇಟು ನೀಡಿರುವ ಜೆಡಿಎಸ್, ಬಿಜೆಪಿಯ ಕಾರ್ಯವೈಖರಿ ಬಗ್ಗೆ ಅದೇ ಧಾಟಿಯಲ್ಲಿ ಕುಹುಕವಾಡಿದೆ.

ಲೋಕಸಮರದ ಲೇಟೆಸ್ಟ್ ಅಪ್ಡೇಟ್ಸ್‌ಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿಯು ಒಂದು ತಿಂಗಳು ಆಪರೇಷನ್ ಕಮಲ ಮಾಡೋದರಲ್ಲಿ ಕಳೆಯಿತು, ಮುಂದಿನ 3 ತಿಂಗಳು ಶಾಸಕರನ್ನು ಬುಟ್ಟಿಗೆ ಹಾಕೋ ಪ್ರಯತ್ನ ನಡೆಸ್ತು, ಮತ್ತೆರಡು ತಿಂಗಳು ಶಾಸಕರಿಗೆ ಹಣದ ಆಮಿಷವೊಡ್ಡೋದು, 7 ನೇ ತಿಂಗಳು ಶಾಸಕರನ್ನು ಬಲೆಗೆ ಹಾಕಲು ಹೋಗಿ ಸಿಕ್ಕಿ ಬಿದ್ದದ್ದು ಆಯ್ತು. 8ನೇ ತಿಂಗಳು ಆಪರೇಷನ್‌ನಿಂದ ಚೇತರಿಸಿಕೊಳ್ಳುವುದರಲ್ಲೇ ಆಯ್ತು, ಒಟ್ಟಾರೆಯಾಗಿ ಕರ್ನಾಟಕದ ಜನತೆಗೆ ಸುಳ್ಳು ಹೇಳೋದರಲ್ಲಿ ಬಿಜೆಪಿ ನಿಸ್ಸೀಮ ಪಕ್ಷವೆಂದು ಎಂದು ಜೆಡಿಎಸ್ ಟಾಂಗ್ ಕೊಟ್ಟಿದೆ.

Scroll to load tweet…

ಇಷ್ಟಕ್ಕೆ ಕಥೆ ಮುಗಿದಿಲ್ಲ. ಜೆಡಿಎಸ್‌ ಟ್ವೀಟ್‌ಗೆ ಬಿಜೆಪಿ ಮತ್ತೆ ವ್ಯಂಗವಾಡಿದೆ. ನಿಮ್ಮ ಬಳಿ ಸಿನಿಮಾ ನಿರ್ಮಾಪಕರು ಮತ್ತು ಒಳ್ಳೆ ನಟರು ಇದ್ದಾಗ್ಯೂ, ಉತ್ತರ ಕೊಡೋದಿಕ್ಕೆ ನಮ್ಮನ್ನೇ ನಕಲು ಮಾಡುವ ಅವಸ್ಥೆ ನಿಮ್ಮದು. ಅದೇ ಎಲ್ಲಾವನ್ನೂ ಹೇಳುತ್ತೆ, ಎಂದು ತಿರುಗೇಟು ನೀಡಿದೆ.

Scroll to load tweet…

ಎಲೆಕ್ಷನ್ ಸೀಸನ್ ಆರಂಭವಾಗಿದೆ. ಇನ್ನು ಚುನಾವಣೆ ಮುಗಿದು ಫಲಿತಾಂಶ ಬರುವವರೆಗೂ ಸೋಶಿಯಲ್ ಮೀಡಿಯಾದಲ್ಲಿ ರಾಜಕೀಯ ಪಕ್ಷಗಳ ವಿಡಂಬನಾತ್ಮಕ ವಾಕ್ಸಮರ ನೆಟಿಜನ್‌ಗಳಿಗೆ ಪುಕ್ಸಟ್ಟೆ ಮನರಂಜನೆ ಒದಗಿಸುವುದರಲ್ಲಿ ಸಂಶಯವಿಲ್ಲ!

17ನೇ ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ದೇಶದಲ್ಲಿ ಏ.11 ರಿಂದ ಆರಂಭವಾಗಿ ಮೇ 19ರವರೆಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 23 ರಂದು ಫಲಿತಾಂಶ ಪ್ರಕಟವಾಗಲಿದೆ. 

ಕರ್ನಾಟಕದಲ್ಲಿ 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಏ. 18 (ಗುರುವಾರ), ಇನ್ನುಳಿದ 14 ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಏ. 23 (ಮಂಗಳವಾರ) ಮತದಾನ ನಡೆಯಲಿದೆ.