ಮಹಾಭಾರತ ಸಂಗ್ರಾಮ: ರಾಜಸ್ಥಾನ

ಜೈಪುರ[ಮಾ.12]: ಈವರೆಗೆ ಬಿಜೆಪಿ ಭದ್ರಕೋಟೆ ಎಂದೇ ಹೇಳಲಾಗುತ್ತಿದ್ದ ರಾಜಸ್ಥಾನದಲ್ಲಿ ಈಗ ಬದಲಾವಣೆಯ ಗಾಳಿ ಬೀಸಬಹುದು ಎಂಬಂತೆ ಭಾಸವಾಗುತ್ತಿದ್ದು, ಈ ಸಲ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಸಮಬಲದ ಸ್ಪರ್ಧೆ ನಿರೀಕ್ಷಿಸಲಾಗಿದೆ.

2014ರ ಚುನಾವಣೆಯಲ್ಲಿ ಮೋದಿ ಅಲೆ ಇದ್ದ ಕಾರಣ 25ಕ್ಕೆ ಎಲ್ಲ 25 ಕ್ಷೇತ್ರಗಳನ್ನೂ ಬಿಜೆಪಿ ಗೆದ್ದು, ‘ವೈಟ್‌ವಾಷ್’ ಮಾಡಿತ್ತು. ಒಂದೂ ಸ್ಥಾನ ಗೆಲ್ಲಲಾಗದೇ ಕಾಂಗ್ರೆಸ್ ಧೂಳೀಪಟವಾಗಿತ್ತು. ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರವು ಆಗಲೇ ರಾಜಸ್ಥಾನದಲ್ಲಿ ಪ್ರತಿಷ್ಠಾಪಿತವಾಗಿದ್ದ ಕಾರಣ 2014ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಗೆಲ್ಲಲು ಸಹಕಾರಿಯಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪ್ರತಿಷ್ಠಾಪಿತವಾಗಿದೆ. 2014ರಲ್ಲಿ ಇದ್ದಷ್ಟು ಮೋದಿ ಅಲೆ ಈಗ ಇಲ್ಲ. ಹೀಗಾಗಿ ಬಿಜೆಪಿಗೆ ಸಮಬಲ ಸ್ಪರ್ಧೆ ನೀಡಲು ಕಾಂಗ್ರೆಸ್ ಸಜ್ಜಾಗಿದ್ದು, ಯಾವ ಪಕ್ಷಗಳಿಗೆ ಎಷ್ಟು ಸ್ಥಾನ ಲಭಿಸಲಿದೆ ಎಂಬುದು ಕುತೂಹಲಕಾರಿಯಾಗಿದೆ.

ಮೋದಿ ಅಲೆಯಲ್ಲಿ ಕಾಂಗ್ರೆಸ್ ಧೂಳೀಪಟ:

2009ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 25ರಲ್ಲಿ 20 ಸ್ಥಾನ ಜಯಿಸಿತ್ತು. ಬಿಜೆಪಿ ಕೇವಲ 4 ಹಾಗೂ ಪಕ್ಷೇತರರು ಒಂದು ಸ್ಥಾನ ಜಯಿಸಿದ್ದರು. ಆದರೆ ಐದು ವರ್ಷ ಬಳಿಕ ಪರಿಸ್ಥಿತಿ ಸಂಪೂರ್ಣ ತಿರುವು ಮುರುವಾಯಿತು. ಮೋದಿ ಅಲೆ ಯಾವ ಮಟ್ಟಿಗೆ ಎದ್ದಿತೆಂದರೆ ಕಾಂಗ್ರೆಸ್ ಪಕ್ಷದ ಎಲ್ಲ 25 ಅಭ್ಯರ್ಥಿಗಳು ಸೋಲು ಅನುಭವಿಸಿದರು. ಪಕ್ಷದ ಘಟಾನುಘಟಿಗಳು ಮಣ್ಣುಮುಕ್ಕಿದರು. ಎಲ್ಲ 25 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತು. 2014ರಲ್ಲಿ ಬಿಜೆಪಿ ಗೆಲ್ಲಲು ಮೋದಿ ಅಲೆಯ ಜತೆಗೆ ರಾಜಸ್ಥಾನದಲ್ಲಿ ಬಿಜೆಪಿ 165 ಶಾಸಕರನ್ನು ಹೊಂದಿದ್ದೂ ಪ್ರಮುಖ ಕಾರಣವಾಯಿತು.

ಕಾಂಗ್ರೆಸ್ಸಿಗೆ ಈಗ ಅಧಿಕಾರ:

ಆದರೆ 2018ರ ಅಂತ್ಯಕ್ಕೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಬದಲಾ ವಣೆಯ ಗಾಳಿ ಬೀಸಿದೆ. 165 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ ಬಲ 73ಕ್ಕೆ ಇಳಿದಿದೆ. ಕಾಂಗ್ರೆಸ್ ಪಕ್ಷ ವಿಧಾನಸಭೆಯಲ್ಲಿ 100 ಶಾಸಕರನ್ನು ಹೊಂದುವ ಮೂಲಕ ಅಧಿಕಾರಕ್ಕೆ ಬಂದಿದೆ. ಇದಲ್ಲದೆ, ಮೋದಿ ಅಲೆ 2014ರಂತೆ ಈ ಸಲ ಪರಿಣಾಮ ಕಾರಿಯಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಸಮಬಲದ ಸ್ಪರ್ಧೆ ಹೇಗೆ?

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೇ.39.3 ಮತಗಳನ್ನು ಪಡೆದಿದ್ದರೆ ಬಿಜೆಪಿ ಶೇ.38.8 ಮತಗಳನ್ನು ಪಡೆದಿವೆ. ಈ ನಡೆಯುತ್ತಿರುವುದು ಲೋಕಸಭೆ ಚುನಾವಣೆಯಾದರೂ, ವಿಧಾನಸಭೆ ಚುನಾವಣೆ ಪರಿಣಾಮಗಳು ಲೋಕಸಭೆ ಮೇಲೆ ಬೀಳುವುದು ನಿಶ್ಚಿತವಾಗಿದೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪಕ್ಷವಾಗಿರುವ ಕಾರಣ ಬಿಜೆಪಿಗೆ ತೀವ್ರ ಪೈಪೋಟಿ ಎದುರಾಗುವುದು ನಿಶ್ಚಿತವಾಗಿದೆ.

ಸಂಭಾವ್ಯ ಪ್ರಮುಖ ಅಭ್ಯರ್ಥಿಗಳು

ಗಜೇಂದ್ರ ಸಿಂಗ್ ಶೆಖಾವತ್(ಬಿಜೆಪಿ)

ರಾಜ್ಯವರ್ಧನ್ ಸಿಂಗ್ ರಾಠೋಡ್ (ಬಿಜೆಪಿ)

ಸೋನಾರಾಂ ಚೌಧರಿ (ಬಿಜೆಪಿ)

ದುಷ್ಯಂತ ಸಿಂಗ್ (ಬಿಜೆಪಿ)

ಪ್ರಮುಖ ಕ್ಷೇತ್ರಗಳು

ಬಿಕಾನೇರ್, ಅಜ್ಮೇರ್, ಝಾಲಾವರ್-ಬರಣ್, ಜೋಧಪುರ, ಬಾರ್ಮೇರ್, ಜೈಪುರ ಗ್ರಾಮೀಣ