ಬೆಳಗಾವಿ :  ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯ ಆಯ್ಕೆ ಇನ್ನು ಅಂತಿಮವಾಗಿಲ್ಲ. ಶೀಘ್ರದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು, ಶಿವಕಾಂತ ಸಿದ್ನಾಳ ಹಾಗೂ ಡಾ. ವಿ.ಎಸ್‌. ಸಾಧುನವರ ಇಬ್ಬರಲ್ಲಿ ಒಬ್ಬರನ್ನು ಹೈಕಮಾಂಡ್‌ ಆಯ್ಕೆ ಮಾಡಲಿದೆ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು. 

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಶಿಕಾಂತ ಸಿದ್ನಾಳ ಹಾಗೂ ಡಾ. ವಿ.ಎಸ್‌.ಸಾಧುನವರ ಬೆಳಗಾವಿ ಕ್ಷೇತ್ರದ ಆಕಾಂಕ್ಷಿಗಳಾಗಿದ್ದಾರೆ. ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್‌ ಸ್ಪರ್ಧೆಗೆ ಒಪ್ಪಿಲ್ಲ. 

ವಿವೇಕರಾವ್‌ ಪಾಟೀಲ ಅರ್ಜಿಯನ್ನೇ ಹಾಕಿಲ್ಲ ಎಂದರು. ಈ ಹಿಂದೆ ಬೆಂಗಳೂರಿನಲ್ಲಿ ಪಕ್ಷದ ವರಿಷ್ಠರೊಂದಿಗೆ ಚರ್ಚೆಯಾಗಿದೆ. ಶನಿವಾರ ದೆಹಲಿಯಲ್ಲಿಯೂ ಸಭೆಯಾಗಿದೆ. ನಂತರ ಸ್ಕ್ರೀನಿಂಗ್‌ ಕಮಿಟಿಯಲ್ಲಿ ಇನ್ನೊಂದು ಬಾರಿ ಸಭೆ ನಡೆಸಿ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುವುದು. ಚಿಕ್ಕೋಡಿ ಕ್ಷೇತ್ರದಿಂದ ಪ್ರಕಾಶ ಹುಕ್ಕೇರಿ ಅವರಿಗೆ ನೀಡುವುದು ಖಚಿತ ಎಂದರು.

ಕರ್ನಾಟಕದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ವಿನಂತಿಸಿಕೊಂಡಿದ್ದಾರೆ. ಚಿಕ್ಕೋಡಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ರಾರ‍ಯಲಿ ನಡೆಸಲಿದ್ದಾರೆ ಎಂದರು.