ಕ್ಷೇತ್ರ ಸಮೀಕ್ಷೆ: ಬಾಗಲಕೋಟೆ ಲೋಕಸಭಾ ಕ್ಷೇತ್ರ

ಈಶ್ವರ ಶೆಟ್ಟರ, ಕನ್ನಡಪ್ರಭ

ಬಾಗಲಕೋಟೆ[ಏ.17]: ಘಟಪ್ರಭಾ ತಟದಲ್ಲಿರುವ ಬಯಲುಸೀಮೆ ಬಾಗಲಕೋಟೆ ಜಿಲ್ಲೆಯಲ್ಲಿ ಇದೀಗ ಸುಡುಬಿಸಿಲಿನೊಂದಿಗೆ ಚುನಾವಣಾ ಕಾವೂ ಹೆಚ್ಚಾಗಿದೆ. ಕೂಡಲಸಂಗಮ, ಬಾದಾಮಿ ಸೇರಿದಂತೆ ಅನೇಕ ಐತಿಹಾಸಿಕ ಸ್ಥಳಗಳಿರುವ ಈ ಲೋಕಸಭಾ ಕ್ಷೇತ್ರವು ರೆಡ್ಡಿ ಸಮುದಾಯಗಳ ನಡುವಿನ ಕದನ ಕಣ ಎಂದೇ ಬಿಂಬಿಸುವ ಕಾಲವೊಂದಿತ್ತು. ಇತ್ತೀಚಿನ 3 ಚುನಾವಣೆಗಳಲ್ಲಿ ಬಿಜೆಪಿ ಲಿಂಗಾಯತ ಸಮುದಾಯದ ಉಪಪಂಗಡವಾದ ಗಾಣಿಗ ಸಮುದಾಯದ ಗದ್ದಿಗೌಡರರನ್ನು ರೆಡ್ಡಿ ಸಮುದಾಯದ ಅಭ್ಯರ್ಥಿಗಳ ವಿರುದ್ಧ ನಿಲ್ಲಿಸಿ ಗೆಲ್ಲಿಸುವ ಮೂಲಕ ಮಾಡಿದ ರಾಜಕೀಯ ತಂತ್ರ ಯಶಸ್ವಿ ಕಂಡಿತ್ತು. ಆದರೆ ಸದ್ಯ ಕಾಂಗ್ರೆಸ್‌ ಆಡಿರುವ ಆಟಕ್ಕೆ ಬಿಜೆಪಿ ತತ್ತರಿಸಿ ಹೋಗಿದೆ. ಏಕೆಂದರೆ ಕಾಂಗ್ರೆಸ್‌ ಪಕ್ಷ ಬಾಗಲಕೋಟೆಯಲ್ಲಿ ಈ ಚುನಾವಣೆಯಲ್ಲಿ ಪ್ರಬಲ ಲಿಂಗಾಯತ ಸಮುದಾಯದವರೇ ಆದ ವೀಣಾ ಕಾಶಪ್ಪನವರನ್ನು ಕಣಕ್ಕಿ​ಳಿ​ಸುವ ಮೂಲಕ ಬಿಜೆಪಿ ನಾಗಾಲೋಟಕ್ಕೆ ತಡೆ ಒಡ್ಡಲು ಹೊರಟಿದೆ.

96ರವರೆಗೂ ‘ಕೈ’ ಭದ್ರಕೋಟೆ:

ಒಂದು ಕಾಲದಲ್ಲಿ ಬಾಗಲಕೋಟೆಯೆಂದರೆ ಕಾಂಗ್ರೆಸ್‌ ಭದ್ರಕೋಟೆಯೆಂದೇ ಪ್ರಸಿದ್ಧವಾಗಿತ್ತು. ಸ್ವಾತಂತ್ರ್ಯದ ಬಳಿಕ ನಡೆದ 16 ಲೋಕಸಭೆ ಚುನಾವಣೆಯಲ್ಲಿ 10 ಬಾರಿ ಕಾಂಗ್ರೆಸ್‌ ಜಯಗಳಿಸಿದ್ದರೆ, 1 ಬಾರಿ ಜನತಾದಳ, 1 ಬಾರಿ ಲೋಕಶಕ್ತಿ, 3 ಬಾರಿ ಬಿಜೆಪಿ ಗೆಲವು ಸಾಧಿಸಿವೆ. ಆರಂಭದಲ್ಲಿ ವಿಜಯಪುರ ದಕ್ಷಿಣ ಲೋಕಸಭಾ ಕ್ಷೇತ್ರವಾಗಿದ್ದ ಬಾಗಲಕೋಟೆ 1957ರಿಂದ 1996ರವರೆಗೆ ನಡೆದ ಎಲ್ಲಾ ಚುನಾವಣೆಯಲ್ಲೂ ಕಾಂಗ್ರೆಸ್‌ ಪಕ್ಷವೇ ಜಯ ಗಳಿಸಿತ್ತು. ಇದರಲ್ಲಿ 10 ಮಂದಿ ರೆಡ್ಡಿ ಸಮುದಾಯದವರು ಪ್ರತಿನಿಧಿಸಿದ್ದರೆ, 4 ಬಾರಿ ಗಾಣಿಗ, 1 ಬಾರಿ ಹಿಂದುಳಿದ, 1 ಬಾರಿ ಲಿಂಗಾಯತ ಸಮುದಾಯದ ಪ್ರತಿನಿಧಿಗಳು ಸಂಸದರಾಗಿದ್ದರು.

ಲಿಂಗಾಯತರೇ ನಿರ್ಣಾಯಕ:

16 ಲಕ್ಷ ಮತದಾರರಲ್ಲಿ 6 ಲಕ್ಷ ಲಿಂಗಾಯತ ಸಮುದಾಯ, 2 ಲಕ್ಷ ಪರಿಶಿಷ್ಟಜಾತಿ ಜನಾಂಗ, 2 ಲಕ್ಷ ಹಾಲುಮತ, 2 ಲಕ್ಷ ಅಲ್ಪಸಂಖ್ಯಾತರು, 1 ಲಕ್ಷ ನೇಕಾರರು, 1 ಲಕ್ಷ ರೆಡ್ಡಿ ಸಮುದಾಯ ಇನ್ನುಳಿದಂತೆ 20ಕ್ಕೂ ಹೆಚ್ಚು ಸಣ್ಣ ಸಮುದಾಯಗಳ 2 ಲಕ್ಷ ಮತಗಳು ಲೋಕಸಭೆ ಕ್ಷೇತ್ರದಲ್ಲಿ ಇರುವುದರಿಂದ ಸಿದ್ದರಾಮಯ್ಯ ಲಿಂಗಾಯತ ಹಾಗೂ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ವರ್ಗಗಳ ಮೇಲೆ ಕಣ್ಣಿಟ್ಟು ಚುನಾವಣೆ ಎದುರಿಸುತ್ತಿದ್ದಾರೆ. ಇಲ್ಲಿನ 8 ವಿಧಾನಸಭಾ ಕ್ಷೇತ್ರಗಳಲ್ಲಿ 6ರಲ್ಲಿ ಬಿಜೆಪಿ ಶಾಸಕರಿದ್ದು ಎರಡು ಕಡೆ ಕಾಂಗ್ರೆಸ್‌ ಶಾಸಕರಿದ್ದಾರೆ.

ಪಿ.ಸಿ.ಗದ್ದಿಗೌಡರ 2004, 2009, 2014ರಲ್ಲಿ ಗೆಲವು ಕಂಡು ಇದೀಗ 4ನೇ ಬಾರಿಗೆ ಗೆಲವಿಗೆ ಪ್ರಯತ್ನ ಆರಂಭಿಸಿದ್ದು, ಪಕ್ಷದ ವಲಯದಲ್ಲೂ ಅವರಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ದೇಶದಲ್ಲೆಡೆ ಮೋದಿ ಅಲೆ ಹಾಗೂ ಬಾಗಲಕೋಟೆ ಲೋಕಸಭಾ ವ್ಯಾಪ್ತಿಯ ಗದಗ ಜಿಲ್ಲೆಯ ನರಗುಂದ ಸೇರಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಜಮಖಂಡಿ ಮತ್ತು ಬಾದಾಮಿ ಹೊರತುಪಡಿಸಿದರೆ ಇನ್ನುಳಿದ ಆರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇರುವುದರಿಂದ ಅವರ ಚುನಾವಣೆಗೆ ಬಹಳಷ್ಟುಸಹಕಾರಿಯಾಗಲಿದೆ. ತಳಮಟ್ಟದ ಕಾರ್ಯಕರ್ತರು ಸಹ ಇವರ ಸರಳತೆಗೆ ಬೆಂಬಲ ಸೂಚಿಸುವ ಸಾಧ್ಯತೆ ಇದೆ.

ಆದರೆ, ಕಾಂಗ್ರೆಸ್‌ ಇದೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಯನ್ನು ಹಾಕುವ ಮೂಲಕ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಮುಂದಾಗಿದೆ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಯಾಗಿ ಉತ್ತಮ ಕಾರ್ಯನಿರ್ವಹಿಸಿರುವ ವೀಣಾ ಕಾಶಪ್ಪನವರ ಸ್ಪರ್ಧೆಯಿಂದ ಜಿಲ್ಲೆಯ ಕಾಂಗ್ರೆಸ್‌ ಪಕ್ಷದಲ್ಲಿ ಹೊಸ ಸಂಚಲನ ಉಂಟುಮಾಡಿದ್ದು, ಹೊಸ ಮುಖಕ್ಕೆ ಮಣೆ ಹಾಕಿರುವ ಕಾಂಗ್ರೆಸ್‌ ಪಕ್ಷದ ನಡೆ ಹಿಂದೆ ಮತಬೇಟೆಯ ಲೆಕ್ಕಾಚಾರವಿದೆ. ಇದರೊಂದಿಗೆ ಪ್ರಬಲ ರಾಜಕೀಯ ಕುಟುಂಬದ ಹಿನ್ನೆಲೆ ಇರುವುದು ವೀಣಾ ಅವರ ಪ್ಲಸ್‌ ಪಾಯಿಂಟ್‌. ಅವರ ಮಾವ ದಿ.ಎಸ್‌.ಆರ್‌.ಕಾಶಪ್ಪನವರ ಶಾಸಕ, ಸಚಿವರಾಗಿ ಕಾರ್ಯನಿರ್ವಹಿಸಿದ್ದರೆ, ಪತಿ ವಿಜಯಾನಂದ ಕಾಶಪ್ಪನವರ ಶಾಸಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಕಾಂಗ್ರೆಸ್‌ ನಡೆ ಹಿಂದೆ ಜಾತಿ ಲೆಕ್ಕಾಚಾರ:

ಕಾಂಗ್ರೆಸ್‌ ಪಕ್ಷದ ಲಿಂಗಾಯತ ಸಮುದಾಯದ ಅಭ್ಯರ್ಥಿಯನ್ನು ಚುನಾವಣೆಗೆ ಇಳಿಸಿರುವುದರಲ್ಲಿ ಪಕ್ಕಾ ರಾಜಕೀಯ ಲೆಕ್ಕಾಚಾರವೇ ಅಡಗಿದೆ. 1980ರಲ್ಲಿ ಪ್ರಬಲ ಲಿಂಗಾಯತ ಸಮುದಾಯದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಬಾಗಲಕೋಟೆಯಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದು ಹೋದ ನಂತರ 4 ದಶಕಗಳ ಕಾಲ ಕಾಂಗ್ರೆಸ್‌ ಪಕ್ಷದಿಂದ ಲಿಂಗಾಯತ ಅಭ್ಯರ್ಥಿಗಳಿಗೆ ಪಕ್ಷ ಅವಕಾಶ ನೀಡಿರಲಿಲ್ಲ. ಈ ಬಾರಿ ಹೇಗಾದರೂ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಮಣಿಸಲು ಕಾಂಗ್ರೆಸ್‌ ಪಕ್ಷ ಲಿಂಗಾಯತ ಪಂಚಮಸಾಲಿ ಸಮಾಜದ ವೀಣಾ ಕಾಶಪ್ಪನವರನ್ನು ಅಭ್ಯರ್ಥಿಯನ್ನಾಗಿ ಮಾಡಿ ಗೆಲವಿನ ತಂತ್ರ ರೂಪಿಸುತ್ತಿದೆ.

ಕ್ಷೇತ್ರ​ದಲ್ಲಿ ನಿರ್ಣಾಯಕರಾಗಿರುವ ಲಿಂಗಾಯತ ಸಮುದಾಯ ಇತ್ತೀಚಿನ ದಿನಗಳಲ್ಲಿ ಬಿಜೆಪಿಯನ್ನು ಬೆಂಬಲಿಸಿಕೊಂಡು ಬಂದಿತ್ತು. ಅದಕ್ಕೆ ಪ್ರಮುಖ ಕಾರಣ ಲೋಕಸಭೆ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಾಬಲ್ಯ ಆ ಸಮುದಾಯದ ನಾಯಕರುಗಳ ಮೇಲೆ ಇರುವುದರಿಂದ ಬಿಜೆಪಿ ಮತಗಳಿಕೆಯಲ್ಲಿ ಯಶಸ್ವಿಯಾಗಿತ್ತು. ಬಿಜೆಪಿಯ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಲಿಂಗಾಯತ ಗಾಣಿಗ ಸಮುದಾಯವಾಗಿದ್ದರೆ, ವೀಣಾ ಕಾಶಪ್ಪನವರ ಲಿಂಗಾಯತ ಪಂಚಮಸಾಲಿ ಸಮುದಾಯ. ಆದರೆ ಸದ್ಯ ಲಿಂಗಾಯತ ಸಮುದಾಯದ ಒಳಪಂಗಡಗಳ ನಡುವೆ ನಡೆಯುತ್ತಿರುವ ಅಭ್ಯರ್ಥಿಗಳ ಚುನಾವಣೆ ಜಿಲ್ಲೆಯಲ್ಲಿನ ರಾಜಕೀಯ ಚಿತ್ರಣವನ್ನೇ ಬುಡಮೇಲು ಮಾಡುವ ಸಾಧ್ಯತೆ ಇದೆ. ಈವರೆಗೆ ಲಿಂಗಾಯತ ಸಮುದಾಯ ಒಟ್ಟಾಗಿ ಗದ್ದಿಗೌಡರನ್ನು ಬೆಂಬಲಿಸುತ್ತಿತ್ತು. ಸದ್ಯ ಆ ಪರಿಸ್ಥಿತಿ ಕ್ಷೇತ್ರದಲ್ಲಿ ಕಾಣುತ್ತಿಲ್ಲ. ಗಾಣಿಗ ಸಮುದಾಯ ಹೊರತುಪಡಿಸಿ ಪ್ರಾಬಲ್ಯ ಇರುವ ಪಂಚಮಸಾಲಿ, ಬಣಜಿಗ ಸಮುದಾಯಗಳ ಮತ ವಿಭಜನೆ ಆಗಿದ್ದೇ ಆದರೆ ಗದ್ದಿಗೌಡರ ಗೆಲವಿನ ನಾಗಾಲೋಟಕ್ಕೆ ಬ್ರೇಕ್‌ ಬೀಳಬಹುದು.

ಸಿದ್ದರಾಮಯ್ಯ ಪ್ರತಿಷ್ಠೆ:

ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರ ಬಾಗಲಕೋಟೆ ಲೋಕಸಭೆ ವ್ಯಾಪ್ತಿಯಲ್ಲಿ ಬರುವುದರಿಂದ ಸಹಜವಾಗಿ ಅಭ್ಯರ್ಥಿ ಆಯ್ಕೆಯಿಂದ ಹಿಡಿದು ಚುನಾವಣೆ ಬಹುತೇಕ ಜವಾಬ್ದಾರಿ ಅವರ ಮೇಲಿದೆ. ಕ್ಷೇತ್ರ​ದಲ್ಲಿರುವ ಬಹುಸಂಖ್ಯಾತ ಲಿಂಗಾಯತ ಸಮುದಾಯವನ್ನು ಒಲಿಸಿಕೊಳ್ಳುವ ಅವರ ತಂತ್ರ ಕಾರ್ಯರೂಪಕ್ಕೆ ಬಂದರೆ ಕಾಂಗ್ರೆಸ್‌ ಗೆಲವಿನ ದಡ ಮುಟ್ಟಬಹುದು.

ಸಮಬಲದ ಹೋರಾಟ:

ಗದಗ ಜಿಲ್ಲೆಯ ನರಗುಂದ ಸೇರಿದಂತೆ ಬಾಗಲಕೋಟೆ ಜಿಲ್ಲೆಯ ಬಾದಾಮಿ, ಹುನಗುಂದ, ಬಾಗಲಕೋಟೆ, ಬೀಳಗಿ, ಮುಧೋಳ ಮೀಸಲು, ಜಮಖಂಡಿ, ತೇರದಾಳ ಕ್ಷೇತ್ರಗಳಲ್ಲಿನ ಸದ್ಯದ ಸ್ಥಿತಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ನಡುವೆ ಸಮಬಲದ ಹೋರಾಟ ಕಾಣುತ್ತಿದೆ. ಸ್ಥಳೀಯ ಸಮಸ್ಯೆಗಳ ಹೊರತಾಗಿಯೂ ಕೆಲವೆಡೆ ಮೋದಿ ಪರವಾದ ಅಲೆ ಕಾಣುತ್ತಿದೆ. ಅಭ್ಯರ್ಥಿಯನ್ನು ನೋಡದೆ ‘ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿ’ ಎಂಬ ಮಾತುಗಳು ಕೇಳಿ ಬಂದರೆ, ‘ಮೂರು ಬಾರಿ ಸಂಸದರಾಗಿ ನಿರೀಕ್ಷಿತ ಕೆಲಸ ಮಾಡಲು ಗದ್ದಿಗೌಡರ ವಿಫಲರಾಗಿದ್ದಾರೆ. ಕಾಂಗ್ರೆಸ್‌ನ ಹೊಸ ಮುಖ ಮಹಿಳಾ ಅಭ್ಯರ್ಥಿಗೆ ಒಮ್ಮೆ ಅವಕಾಶ ನೀಡೋಣ’ ಎಂಬ ಮಾತುಗಳು ಸಹ ಮತದಾರರರಿಂದ ಕೇಳಿ ಬರುತ್ತಿವೆ. ಜಾತಿ ಸಮೀಕರಣದ ಮೇಲೆ ಬಾಗಲಕೋಟೆ ಲೋಕಸಭೆಯ ಫಲಿತಾಂಶ ನಿಂತಿದ್ದು ಲಿಂಗಾಯತ ಸಮುದಾಯದ ಮತ ವಿಭಜನೆಯ ಪ್ರಮಾಣದ ಮೇಲೆ ಫಲಿತಾಂಶ ಕಾಣಬಹುದಾಗಿದೆ.

2014ರ ಫಲಿತಾಂಶ

ಪಿ.ಸಿ.ಗದ್ದಿಗೌಡರ (ಬಿಜೆಪಿ) 5,71,548

ಅಜಯಕುಮಾರ ಸರನಾಯಕ (ಕಾಂಗ್ರೆಸ್‌) 4,54,988

ಗೆಲವಿನ ಅಂತರ 1,16,560

16,87,117 ಒಟ್ಟು ಮತದಾರರು

ಕ್ಷೇತ್ರದ ಮತದಾರರು

16,87,117 ಒಟ್ಟು ಮತದಾರರು | 8,44,513 ಪುರುಷರು | 84,25,13 ಮಹಿ​ಳೆ​ಯರು | 91 ಇತರೆ ಮತದಾರರು

14 ಅಭ್ಯರ್ಥಿಗಳು ಕಣದಲ್ಲಿ

ಬಿಜೆಪಿಯ ಪಿ.ಸಿ.ಗದ್ದಿಗೌಡರ, ಕಾಂಗ್ರೆಸ್ಸಿನ ವೀಣಾ ಕಾಶಪ್ಪನವರ, ಹಿಂದೂಸ್ತಾನ ಜನತಾ ಪಾರ್ಟಿಯ ರಾಮನಗೌಡ ಬಾಳವಾಡ, ಉತ್ತಮ ಪ್ರಜಾಕೀಯ ಪಾರ್ಟಿಯ ಎಂ.ಶಶಿಕುಮಾರ, ಸೆಕ್ಯುಲರ್‌ ಡೆಮೊಕ್ರೆಟಿಕ್‌ ಕಾಂಗ್ರೆಸ್‌ನಿಂದ ಬಸನಗೌಡ ಮೇಟಿ, ರಿಪಬ್ಲಿಕ್‌ ಪಾರ್ಟಿ ಆಫ್‌ ಇಂಡಿಯಾ ಪಕ್ಷದ ಪರಶುರಾಮ ನೀಲನಾಯಕ, ಬಹುಜನ ಮುಕ್ತಿ ಪಾರ್ಟಿಯ ರಾಜೇಂದ್ರ ಅಡಿಗಲ್ಲ, ರೈತ ಭಾರತ ಪಾರ್ಟಿಯ ಮುತ್ತಪ್ಪ ಹಿರೇಕುಂಬಿ, ಕರ್ನಾಟಕ ಜನತಾ ಪಕ್ಷದ ಮಾರುತಿ ಜಮಿನದಾರ್‌, ಬಹುಜನ ಸಮಾಜ ಪಾರ್ಟಿಯ ಮಹಮ್ಮದ ಹುಸೇನ, ಮುಜಾವರ, ಪಕ್ಷೇತ​ರ​ರಾಗಿ ರವಿ ಪಡಸಲಗಿ, ಮುತ್ತು ಸುರುಕೋಡ, ಶಿವರಾಜಕುಮಾರ ತಳವಾರ, ಬುಡ್ಡೇಸಾಬ ಪೆಂಡಾರಿ

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.