ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ‘ಸುದ್ದಿ ಬಿಡುಗಡೆ’ ಪತ್ರಿಕೆಯ ಪ್ರಧಾನ ಸಂಪಾದಕ ಡಾ.ಯು.ಪಿ. ಶಿವಾನಂದ ತಿಳಿಸಿದ್ದಾರೆ.

ಅಮೇಠಿಯಿಂದ ರಾಹುಲ್‌ ಗಾಂಧಿ ವಿರುದ್ಧ, ವಾರಾಣಸಿಯಲ್ಲಿ ಮೋದಿ ವಿರುದ್ಧ ಚುನಾವಣೆಗೆ ನಿಲ್ಲುತ್ತೇನೆ. ಈ ಬಗ್ಗೆ ಈಗಾಗಲೇ ಸಮಾನ ಮನಸ್ಕರು, ಚಿಂತಕರ ಜೊತೆ ಸಮಾಲೊಚನೆ ಮಾಡಿದ್ದೇನೆ. 

ಅಮೇಠಿಗೆ ತೆರಳಿ ಅಲ್ಲಿನ ಜನರೊಂದಿಗೆ ಚರ್ಚೆ ನಡೆಸಿದ್ದೇನೆ. ಮುಂದೆ ವಾರಣಾಸಿಗೂ ತೆರಳುತ್ತೇನೆ. ಈ ಎರಡೂ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿ ಬಳಿಕ ಅಲ್ಲೇ ಪ್ರಚಾರ ಕಾರ್ಯ ಮಾಡಲಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು. 

ಆಡಳಿತವು ‘ಡೆಲ್ಲಿಯಿಂದ ಹಳ್ಳಿಗಲ್ಲ, ಹಳ್ಳಿಯಿಂದ ಡೆಲ್ಲಿಗೆ’ ಎಂಬುದನ್ನು ಪ್ರತಿಪಾದಿಸುವ ಸಲುವಾಗಿ ಹಾಗೂ ಸ್ಥಳೀಯ ನಾಯಕರಿಗಿಂತಲೂ ರಾಷ್ಟ್ರ ಮಟ್ಟದ ನಾಯಕರ ಗಮನ ಸೆಳೆಯುವ ಸಲುವಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಶಿವಾನಂದ ಸ್ಪಷ್ಟಪಡಿಸಿದರು.