ಬೆಂಗಳೂರು: ‘ಮಂಡ್ಯದಲ್ಲಿ ಬಿಜೆಪಿಯವರು ಸುಮಲತಾ ಅಂಬರೀಶ್ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ. ಹಾಗಾಗಿ ಸುಮಲತಾ ಪಕ್ಷೇತರ ಅಭ್ಯರ್ಥಿಯಲ್ಲ, ಬದಲಾಗಿ ಬಿಜೆಪಿ ಅಭ್ಯರ್ಥಿ. 

ಹೀಗಾಗಿ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಅವರನ್ನು ಸಂಪೂರ್ಣ ವಿರೋಧಿಸಬೇಕು. ಒಂದು ವೇಳೆ ಯಾರಾದರೂ ಬೆಂಬಲಿಸಿದರೆ ಭವಿಷ್ಯದಲ್ಲಿ ತಕ್ಕ ಪರಿಣಾಮ ಅನುಭವಿಸಬೇಕಾಗುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಖಡಕ್ ಎಚ್ಚರಿಕೆ ನೀಡಿದ್ದಾರೆ. 

ಶುಕ್ರವಾರ ನಡೆದ ಟ್ವೀಟರ್ ನೇರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸುಮಲತಾ ಅಂಬರೀಶ್ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂದು ಬಿಜೆಪಿಯವರು ತಮ್ಮ ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರು ಸಹಿತ ಪ್ರಕಟಿಸಿದ್ದಾರೆ. ಹೀಗಾಗಿ ಅವರು ಪಕ್ಷೇತರ ಅಭ್ಯರ್ಥಿಯಾಗಲು ಸಾಧ್ಯವೇ ಇಲ್ಲ. ಅವರು ಬಿಜೆಪಿ ಅಭ್ಯರ್ಥಿಯೇ ಆಗುತ್ತಾರೆ. 

ಬಿಜೆಪಿಯ ಚಿಹ್ನೆ ಮಾತ್ರ ಇರುವುದಿಲ್ಲ ಅಷ್ಟೆ. ಹಾಗಾಗಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಅವರನ್ನು ಬಿಜೆಪಿ ಅಭ್ಯರ್ಥಿ ಎಂದೇ ಪರಿಗಣಿಸಿ ಚುನಾವಣೆಯಲ್ಲಿ ಸಂಪೂರ್ಣ ಅವರ ವಿರುದ್ಧವಾಗಿ ಕೆಲಸ ಮಾಡಬೇಕು’ ಎಂದರು. ‘ಒಂದು ವೇಳೆ ಅವರೊಂದಿಗೆ ರಾಜಿಯಾಗಿ ಸುಮಲತಾ ಅವರ ಪರ ಕೆಲಸ ಮಾಡಿದರೆ ಭವಿಷ್ಯದಲ್ಲಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದರು.