ಸಾಧ್ವೀ ಸಾಧ್ವೀ ನಾನೂ ಮಾಲೇಗಾಂವ್‌ನವಳು. ನಂಗೆ ಎಲ್ಲಾ ಗೊತ್ತು. ನಿಮ್ಮನ್ನು ಇದರಲ್ಲಿ ಸಿಲುಕಿಸಿದ್ದಾರೆ. ನಾನೊಬ್ಬಳು ರಾಜಕಾರಣಿ. ನಂಗೆ ಕಾಂಗ್ರೆಸ್‌ನವರ ಆಟವೆಲ್ಲಾ ಗೊತ್ತು’ ಎಂದಿದ್ದಳು ನಾಸಿಕ್‌ ಜೈಲಿನಲ್ಲಿದ್ದ ಆ ಮುಸ್ಲಿಂ ಮಹಿಳೆ. ನಿಜ ಹೇಳಬೇಕೆಂದರೆ ಇವತ್ತಿನವರೆಗೂ ನಾನು ಮಾಲೇಗಾಂವ್‌ ನೋಡಿಲ್ಲ.
 

ಇಲ್ಲಿಯವರೆಗೆ ನೀವು ಸನ್ಯಾಸಿನಿಯಾಗಿದ್ದಿರಿ. ಈಗ ಚುನಾವಣೆಗೆ ಸ್ಪರ್ಧಿಸುತ್ತಿದ್ದೀರಿ. ಏಕೆ ರಾಜಕೀಯ ಪ್ರವೇಶಿಸುವ ನಿರ್ಧಾರ ಕೈಗೊಂಡಿರಿ?

ಆಧ್ಯಾತ್ಮಿಕ ಜೀವನದಲ್ಲಿ ಬಹಳ ಖುಷಿಯಿಂದಿದ್ದೆ. ಆದರೆ 2008ರಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಷಡ್ಯಂತ್ರ ರೂಪಿಸಿ ನನ್ನನ್ನು ಜೈಲಿಗೆ ಕಳಿಸಿತು. ಅಲ್ಲಿ ಎಂದೂ ಊಹಿಸಿರದ ಯಾತನೆ ಅನುಭವಿಸಿದೆ. ಹಿಂದು ಭಯೋತ್ಪಾದನೆ ಎಂಬ ಸುಳ್ಳನ್ನು ಸಾಬೀತುಪಡಿಸಲು ಯುಪಿಎ ಯತ್ನಿಸಿತು. ಅದಕ್ಕಾಗಿ ನಮಗೆ ಚಿತ್ರವಿಚಿತ್ರ ಹಿಂಸೆ ನೀಡಿತು. ಈ ಹಿಂಸೆ ಒಂದೆರಡು ವರ್ಷದ ಮಾತಲ್ಲ, ಒಂಭತ್ತು ವರ್ಷ ನನ್ನನ್ನು ಹಿಂಸಿಸಿದರು. ನಮ್ಮದೇ ದೇಶದ ಪ್ರಜೆಯಾಗಿದ್ದುಕೊಂಡು ಅವರು ಈ ದೇಶದ ವಿರುದ್ಧ ಕೆಲಸ ಮಾಡುತ್ತಿದ್ದರು. ಅದನ್ನೆಲ್ಲ ನೋಡಿ ನನ್ನೊಳಗೆ ಆಕ್ರೋಶ ಕುದಿಯುತ್ತಿತ್ತು. ಹಿಂದು ರಾಷ್ಟ್ರದಲ್ಲಿ ಹಿಂದುಗಳನ್ನೇ ಭಯೋತ್ಪಾದಕರೆಂದು ಬಿಂಬಿಸುವವರಿಗೆ ಪಾಠ ಕಲಿಸಬೇಕು ಅನ್ನಿಸಿತ್ತು. ಈ ಕಾರ್ಯದಲ್ಲಿ ನಾನೊಂದು ನೆಪ ಅಷ್ಟೆ. ಆ ನೆಪವೇ ನನ್ನನ್ನು ರಾಜಕಾರಣಕ್ಕೆ ಕರೆತಂದಿದೆ.

ನಿಮಗೆ ಜೈಲಿನಲ್ಲಿ ಯಾವುದೇ ರೀತಿಯ ಹಿಂಸೆ ನೀಡಿಲ್ಲ ಎಂದು ಮಾನವ ಹಕ್ಕುಗಳ ಆಯೋಗವೇ ಹೇಳಿದೆಯಲ್ಲ?

ನನಗೆ ಹಿಂಸೆ ನೀಡಿದ್ದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ. ಇಂದಿಗೂ ನನಗೆ ನೆಟ್ಟಗೆ ನಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕಿಂತ ಪ್ರಮಾಣ ಬೇಕೆ? ನನಗೆ ಹಿಂಸೆಯಾಗಿದ್ದರ ಬಗ್ಗೆ ವೈದ್ಯಕೀಯ ವರದಿಗಳಿವೆ. ಅವೂ ಸುಳ್ಳೇ?

ನಿಮಗೆ ಕ್ಯಾನ್ಸರ್‌ ಬಂದಿತ್ತು. ಆದರೆ, ಸರಿಯಾದ ಚಿಕಿತ್ಸೆ ಪಡೆಯದೆ ಆಯುರ್ವೇದದ ಔಷಧಿ ಕುಡಿಯುತ್ತಾ ಇದ್ದುಬಿಟ್ಟಿರಿ. ಹೀಗಾಗಿ ಈಗ ನಿಮಗೆ ಸರಿಯಾಗಿ ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್‌ ಹೇಳುತ್ತದೆ?

ಯಾರಾದರೂ ಅವರ ದೇಹದ ಆರೋಗ್ಯದ ಜೊತೆ ಆಟವಾಡುತ್ತಾರೆಯೇ? ಕ್ಯಾನ್ಸರ್‌ಗೆ ಸರಿಯಾದ ಚಿಕಿತ್ಸೆಯನ್ನೇ ಪಡೆದಿದ್ದೇನೆ. ಐದು ಆಪರೇಷನ್‌ಗೆ ಒಳಗಾಗಿದ್ದೇನೆ. ನಾನೊಬ್ಬಳು ಸನ್ಯಾಸಿನಿ. ನನ್ನ ತಂದೆ ಉತ್ತಮ ಆಯುರ್ವೇದ ಪಂಡಿತರಾಗಿದ್ದರು. ಹೀಗಾಗಿ ಆಯುರ್ವೇದದ ಔಷಧವನ್ನೂ ತೆಗೆದುಕೊಂಡಿದ್ದೇನೆ.

ನೀವು ಈ ಚುನಾವಣೆ ಧರ್ಮ ಮತ್ತು ಅಧರ್ಮದ ನಡುವಿನ ಯುದ್ಧ ಎನ್ನುತ್ತಿದ್ದೀರಿ. ಏಕೆ?

ಧರ್ಮಕ್ಕೆ ಹಾನಿಯಾದಾಗ ಸ್ವತಃ ದೇವರೇ ಮನುಷ್ಯನ ದೇಹದೊಳಗೆ ಸೇರಿ ಅದನ್ನು ಸರಿಪಡಿಸುತ್ತಾನೆ. ಆಗ ಧರ್ಮದ ಪುನರುತ್ಥಾನವಾಗುತ್ತದೆ. ಈಗಲೂ ಧರ್ಮದ ಪುನರುತ್ಥಾನಕ್ಕಾಗಿ ಭಗವಂತ ಬಂದಿದ್ದಾನೆ. ಹೀಗಾಗಿ ಇದು ಧರ್ಮ ಮತ್ತು ಅಧರ್ಮದ ನಡುವಿನ ಯುದ್ಧ.

ನಿಮ್ಮ ವಿರುದ್ಧ ಭೋಪಾಲದಲ್ಲಿ ಸ್ಪರ್ಧಿಸಿರುವುದು ಕಾಂಗ್ರೆಸ್‌ನ ದಿಗ್ವಿಜಯ್‌ ಸಿಂಗ್‌. ಅವರು ‘ನಾನೂ ಕೂಡ ಹಿಂದು’ ಎನ್ನುತ್ತಾರೆ. ಅವರ ವಿರುದ್ಧ ನಿಮ್ಮ ಯುದ್ಧ ಅಧರ್ಮದ ವಿರುದ್ಧದ ಯುದ್ಧವಾಗುತ್ತದೆಯೇ?

ಸ್ವತಃ ದಿಗ್ವಿಜಯ್‌ ಸಿಂಗ್‌ ಅವರೇ ತಾವು ಹಿಂದುತ್ವವನ್ನು ನಂಬುವುದಿಲ್ಲ ಎಂದು ಹೇಳಿದ್ದಾರೆ. ಅವರು ಹಿಂದು ಆಗಿದ್ದರೆ ಹಿಂದು ಭಯೋತ್ಪಾದನೆಯೆಂಬ ಸುಳ್ಳು ಆರೋಪವನ್ನು ಏಕೆ ಸಮರ್ಥಿಸುತ್ತಿದ್ದರು? ಹಿಂದು ಎಂಬುದೊಂದು ಸಂಸ್ಕೃತಿ. ಈ ಸಂಸ್ಕೃತಿಯಲ್ಲಿ ಯಾರಿಗೂ ಹಿಂಸೆ ನೀಡುವುದಿಲ್ಲ. ಅದನ್ನು ದಿಗ್ವಿಜಯ್‌ ಸಿಂಗ್‌ ನಂಬುವುದಿಲ್ಲ.

ನಕ್ಸಲೀಯರಲ್ಲೂ ಹಿಂದುಗಳಿದ್ದಾರೆ. ಅವರು ಬಂದೂಕು ಹಿಡಿದಿಲ್ಲವೇ?

ಅದು ರಾಜಕೀಯ ಸಿದ್ಧಾಂತದಿಂದ ಹುಟ್ಟಿದ ಸಂಘರ್ಷ. ಅವರನ್ನು ನಕ್ಸಲರನ್ನಾಗಿ ಮಾಡಿದ್ದು ಯಾರು? ಯಾವ ಸಮಯದಲ್ಲಿ ಅವರು ಬಂದೂಕು ಎತ್ತಿಕೊಂಡರು? ಇದನ್ನು ಗಮನಿಸಿದರೆ ನಕ್ಸಲಿಸಂ ಅರ್ಥವಾಗುತ್ತದೆ. ಅದು ಹಿಂದು ಭಯೋತ್ಪಾದನೆಯಲ್ಲ.

ದೇಶದಲ್ಲಿ ಬಿಜೆಪಿಯ ಆಡಳಿತವೇ ಇದೆ. ಹಾಗಿರುವಾಗ ಹಿಂದು ಧರ್ಮಕ್ಕೆ ಏನು ಅಪಾಯವಿದೆ?

ಇದು ಇಂದಿನ ಪ್ರಶ್ನೆಯಲ್ಲ. ಹಿಂದು ಭಯೋತ್ಪಾದನೆ ಎಂಬ ಸುಳ್ಳು ಪ್ರಚಾರ 2008ರ ಆಸುಪಾಸಿನಿಂದಲೇ ಶುರುವಾದ ಷಡ್ಯಂತ್ರ. ಅದರ ಮೂಲಕ ಹಿಂದು ಧರ್ಮಕ್ಕೆ ಮಸಿ ಬಳಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ. ನನ್ನನ್ನೂ ಭಯೋತ್ಪಾದಕಿ ಅಂದರು. ಆದರೆ ಹಿಂದು ಯಾವತ್ತೂ ಭಯೋತ್ಪಾದಕ ಆಗಲಾರ. ಈ ಚುನಾವಣೆಯಲ್ಲಿ ಅದು ಸಾಬೀತಾಗಲಿದೆ.

ನೀವು ಭೋಪಾಲದಲ್ಲಿ ಸ್ಪರ್ಧಿಸುವುದು ಘೋಷಣೆಯಾದ ದಿನದಿಂದ ಇಡೀ ದೇಶದ ಗಮನ ಈ ಕ್ಷೇತ್ರದತ್ತ ನೆಟ್ಟಿದೆ. ಮತಗಳ ಧ್ರುವೀಕರಣಕ್ಕೆಂದೇ ಬಿಜೆಪಿಯವರು ನಿಮ್ಮನ್ನು ನಿಲ್ಲಿಸಿದ್ದಾರೆಯೇ?

ಇಲ್ಲ. ಮೊದಲೇ ಹೇಳಿದಂತೆ ಸನಾತನ ಧರ್ಮಿಗಳು ಭಯೋತ್ಪಾದಕರಲ್ಲ ಎಂಬುದನ್ನು ಸಾಬೀತುಪಡಿಸಲು ನಾನು ಸ್ಪರ್ಧಿಸಿದ್ದೇನೆ. ಹಿಂದು ಭಯೋತ್ಪಾದನೆಯ ಕತೆ ಕಟ್ಟಿದ ಸೂತ್ರಧಾರಿ ದಿಗ್ವಿಜಯ್‌ ಸಿಂಗ್‌. ಅವರು ಸುಳ್ಳೆಂದು ನಾನು ಸಾಬೀತುಪಡಿಸಬೇಕು.

ನೀವು ವಿವಾದಾಸ್ಪದ ಹೇಳಿಕೆಗಳಿಂದ ದೊಡ್ಡ ಸುದ್ದಿಯಾಗುತ್ತಿದ್ದೀರಿ. ಬಾಬ್ರಿ ಮಸೀದಿ ಧ್ವಂಸದಲ್ಲಿ ನಾನೂ ಪಾಲ್ಗೊಂಡಿದ್ದೇನೆ ಎಂದು ಹೇಳಿದ್ದೀರಿ. ಆ ಘಟನೆಯಲ್ಲಿ ನಿಮ್ಮ ಪಾತ್ರವೇನು?

ಅದೊಂದು ಆಂದೋಲನ. ಅಲ್ಲಿ ಧರ್ಮದ ಪ್ರಶ್ನೆಯಿತ್ತು. ಎಲ್ಲರೂ ಸೇರಿ ನಮ್ಮ ಸ್ವಾಭಿಮಾನದ ರಕ್ಷಣೆಗೆ ಕ್ರಮ ಕೈಗೊಂಡೆವು. ಅದರಲ್ಲಿ ವಿವಾದ ಅಥವಾ ರಾಜಕೀಯ ಏನೂ ಇಲ್ಲ. ನಾವು ಕಾನೂನು ಕೂಡ ಉಲ್ಲಂಘಿಸಿಲ್ಲ.

ನೀವು ಇನ್ನೊಂದು ವಿವಾದಾಸ್ಪದ ಹೇಳಿಕೆ ನೀಡಿದ್ದು ಹೇಮಂತ್‌ ಕರ್ಕರೆ ಬಗ್ಗೆ. ಅವರು ಮುಂಬೈ ದಾಳಿಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ಹುತಾತ್ಮರಾದವರು. ಬಹಳ ಜನರ ದೃಷ್ಟಿಯಲ್ಲಿ ಅವರೊಬ್ಬ ಹೀರೋ. ನಿಮ್ಮ ಬದುಕಿನಲ್ಲಿ ಅವರ ಪಾತ್ರವೇನು?

ನಿಜ ಹೇಳುತ್ತೇನೆ, ಅವರಿಂದ ನಾನು ಎಷ್ಟುಹಿಂಸೆ ಅನುಭವಿಸಿದ್ದೇನೆ ಅಂದರೆ ಅದನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ವಿಚಾರಣೆಯ ವೇಳೆ ಒಬ್ಬ ಸಾಧ್ವಿಗೆ ಅವರು ಎಷ್ಟೆಲ್ಲಾ ಕೊಳಕು ಮಾತುಗಳಿಂದ ಬೈಯುತ್ತಿದ್ದರು. ಕಾನೂನುಬಾಹಿರವಾಗಿ 12 ದಿನ ನನ್ನನ್ನು ಜೈಲಿನಲ್ಲಿರಿಸಿದ್ದರು. ಆಗ ನೀಡಿದ ಹಿಂಸೆ, ನನ್ನನ್ನು ಬೈಯಲು ಬಳಸಿದ ಕೊಳಕು ಪದಗಳನ್ನು ಹೇಗೆ ಮರೆಯಲಿ?

ನಿಮ್ಮನ್ನು ಬಂಧಿಸಿದ್ದು ಮಾಲೇಗಾಂವ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ. ಒಂಭತ್ತು ವರ್ಷ ಜೈಲಿನಲ್ಲಿದ್ದಿರಿ. ನಿಮ್ಮ ಹೆಸರಿನ ಜೊತೆಗೆ ಆ ಪ್ರಕರಣ ಜನರ ಮನಸ್ಸಿನಲ್ಲಿ ಸದಾಕಾಲ ನೆನಪಿನಲ್ಲುಳಿಯುತ್ತದೆ. ನಿಜಕ್ಕೂ ಅಲ್ಲಿ ನಡೆದಿದ್ದು ಏನು?

ಮಾಲೇಂಗಾವ್‌ ಊರನ್ನು ನಾನು ಇವತ್ತಿನವರೆಗೆ ನೋಡಿಲ್ಲ. ಆ ಸ್ಫೋಟಕ್ಕೂ ಮುನ್ನ ಮಾಲೇಗಾಂವ್‌ನ ಹೆಸರು ಕೂಡ ಕೇಳಿರಲಿಲ್ಲ. ನಾನು ನಾಸಿಕ್‌ ಜೈಲಿನಲ್ಲಿದ್ದಾಗ ಒಬ್ಬ ಮುಸ್ಲಿಂ ಮಹಿಳಾ ಕೈದಿ ಕೋರ್ಟ್‌ಗೆ ಹೋಗುವಾಗ ನನ್ನ ಸೆಲ್‌ನ ಹೊರಗಿನಿಂದ ಕೈಬೀಸುತ್ತಾ ‘ಸಾಧ್ವೀ ಸಾಧ್ವೀ ನಾನು ಮಾಲೇಗಾಂವ್‌ನವಳು. ನಂಗೆ ಎಲ್ಲಾ ಗೊತ್ತು. ನಿಮ್ಮನ್ನು ಇದರಲ್ಲಿ ಸಿಲುಕಿಸಿದ್ದಾರೆ. ನಾನು ರಾಜಕಾರಣಿ, ನಂಗೆ ಕಾಂಗ್ರೆಸ್‌ನವರ ಆಟವೆಲ್ಲಾ ಗೊತ್ತು’ ಎಂದಳು. ನಾನು ನಿರ್ದೋಷಿ ಹಾಗೂ ಇದು ಕಾಂಗ್ರೆಸ್‌ನ ಷಡ್ಯಂತ್ರ ಎಂಬುದು ಎಲ್ಲರಿಗೂ ಗೊತ್ತು. ರಾಷ್ಟ್ರೀಯ ತನಿಖಾ ದಳ ನನಗೆ ಕ್ಲೀನ್‌ಚಿಟ್‌ ನೀಡಿದೆ.

ಆದರೆ ಸ್ಫೋಟದಲ್ಲಿ ಬಳಸಿದ ಎಲ್‌ಎಂಎಲ್‌ ಸ್ಕೂಟರ್‌ ನಿಮ್ಮ ಹೆಸರಿನಲ್ಲಿ ನೋಂದಣಿಯಾಗಿತ್ತಲ್ಲವೇ?

ಇಲ್ಲ. ಅದು ಎಟಿಎಸ್‌ನವರು ಕಟ್ಟಿದ ಕತೆ. ನನಗೆ ಯಾವತ್ತೂ ಅವರು ಅದರ ದಾಖಲೆ ತೋರಿಸಲಿಲ್ಲ. 2004ರಲ್ಲೇ ಆ ಮೋಟರ್‌ಸೈಕಲ್‌ ನಾನು ಮಾರಿದ್ದೆ.

ನಿಮಗೆ ಕ್ಲೀನ್‌ಚಿಟ್‌ ಸಿಕ್ಕಿದ್ದು ಮಾಲೇಗಾಂವ್‌ ಪ್ರಕರಣದಲ್ಲಿ. ಆದರೆ, ಸುನೀಲ್‌ ಜೋಶಿ ಹತ್ಯೆ ಪ್ರಕರಣದಲ್ಲಿ ಮಧ್ಯಪ್ರದೇಶದ ಬಿಜೆಪಿ ಸರ್ಕಾರವೇ ನಿಮ್ಮನ್ನು ಬಂಧಿಸಿತ್ತು ಎಂದು ದಿಗ್ವಿಜಯ್‌ ಸಿಂಗ್‌ ಹೇಳಿದ್ದಾರಲ್ಲ?

ಇದೆಲ್ಲವೂ ದಿಗ್ವಿಜಯ್‌ ಸಿಂಗ್‌ ಅವರದೇ ಷಡ್ಯಂತ್ರ. ಎನ್‌ಐಎ ಹಾಗೂ ಎಟಿಎಸ್‌ ಮೇಲೆ ಒತ್ತಡ ಹೇರಿ ಇದನ್ನೆಲ್ಲ ಮಾಡಿದರು.

ಕೊನೆಯದಾಗಿ ಹೇಳಿ. ನೀವು ಭೋಪಾಲದಲ್ಲಿ ಗೆಲ್ಲುತ್ತೀರಾ?

ಖಂಡಿತ ಗೆಲ್ಲುತ್ತೇನೆ. ಅನಾಯಾಸವಾಗಿ ಗೆಲ್ಲುತ್ತೇನೆ. ಏಕೆಂದರೆ ಧರ್ಮ ಹಾಗೂ ಸತ್ಯ ಯಾವತ್ತೂ ಸೋಲುವುದಿಲ್ಲ.