ಮೈತ್ರಿ ಪಕ್ಷಗಳ ಭದ್ರಕೋಟೆ ಹೇಗೆ ಭೇದಿಸ್ತೀರಿ?: ಅಶ್ವಥ್‌ನಾರಾಯಣ ಗೌಡ ಕೊಟ್ಟ ಉತ್ತರ?
ಮೈತ್ರಿ ಪಕ್ಷಗಳ ಭದ್ರಕೋಟೆ ಹೇಗೆ ಭೇದಿಸ್ತೀರಿ?| ಬೆಂಗಳೂರು ಗ್ರಾಮಾಂತರದಲ್ಲಿ ನಮ್ಮ ಗ್ರೌಂಡ್‌ವರ್ಕ್ ಚೆನ್ನಾಗಿದೆ| ಜೆಡಿಎಸ್‌ನವರು ಡಿ.ಕೆ.ಸುರೇಶ್ ಪರ ಕೆಲಸ ಮಾಡುತ್ತಿಲ್ಲ: ಅಶ್ವಥ್‌ನಾರಾಯಣ ಗೌಡ
ಎಂ.ಅಫ್ರೋಜ್ ಖಾನ್
ರಾಮನಗರ[ಏ.12]: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಭದ್ರಕೋಟೆ. ಅದನ್ನು ಭೇದಿಸಿ ಕಮಲ ಅರಳಿಸುವ ಪ್ರಯತ್ನಕ್ಕೆ ಬಿಜೆಪಿ ಕೈ ಹಾಕಿದೆ. ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಸಹೋದರ, ಹಾಲಿ ಸಂಸದ ಡಿ.ಕೆ.ಸುರೇಶ್ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದರೆ, ಬಿಜೆಪಿ ತನ್ನ ರಾಜ್ಯ ವಕ್ತಾರ ಅಶ್ವಥ್‌ನಾರಾಯಣ ಗೌಡ ಅವರನ್ನು ಹುರಿಯಾಳಾಗಿ ಕಣಕ್ಕಿಳಿಸಿದೆ.
ವಾಸ್ತವವಾಗಿ ಅಶ್ವಥ್‌ನಾರಾಯಣಗೌಡರು ತಮ್ಮ ತವರು ಜಿಲ್ಲೆಯಾದ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿದ್ದರು. ಆದರೆ, ಅಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಕಣಕ್ಕಿಳಿಯುವುದು ಖಚಿತವಾಗುತ್ತಿದ್ದಂತೆಯೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಟಿಕೆಟ್ ಕೇಳಿದರು. ಆದರೆ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಅವರ ಪುತ್ರಿ ನಿಶಾ ಹಾಗೂ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಅವರ ಹೆಸರು ಪ್ರಸ್ತಾಪವಾದ ಹಿನ್ನೆಲೆಯಲ್ಲಿ ಸ್ಪರ್ಧೆಯ ಉಸಾಬರಿ ಬೇಡ ಎಂದುಕೊಂಡು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಡಿ.ವಿ.ಸದಾನಂದಗೌಡರ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಯೋಗೇಶ್ವರ್ ಅವರು ತಮ್ಮ ಬದಲು ಪುತ್ರಿಗೆ ನೀಡುವಂತೆ ಒತ್ತಡ ಹೇರಿದ್ದರಿಂದ ಅದನ್ನು ತಳ್ಳಿ ಹಾಕಿದ ಬಿಜೆಪಿ ವರಿಷ್ಠರು ಕೊನೆಯ ಕ್ಷಣದಲ್ಲಿ ಅಶ್ವಥ್‌ನಾರಾಯಣ ಗೌಡ ಅವರನ್ನು ಅಭ್ಯರ್ಥಿಯನ್ನಾಗಿಸಿದರು.
ಇದೀಗ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಒಮ್ಮತದ ಅಭ್ಯರ್ಥಿಯಾಗಿರುವ ಡಿ.ಕೆ.ಸುರೇಶ್ ಎಂಬ ಬಲಾಢ್ಯ ಅಭ್ಯರ್ಥಿಯನ್ನು ಎದುರಿಸಲು ಬಿರುಸಿನ ಪ್ರಚಾರ ಕೈಗೊಂಡಿರುವ ಅಶ್ವಥ್‌ನಾರಾಯಣ ಗೌಡ ‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವಾರು ವಿಚಾರಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಸಂದರ್ಶನದ ಪೂರ್ಣ ಪಾಠ ಹೀಗಿದೆ:
* ಮೊದಲ ಬಾರಿಗೆ ಸಂಸತ್ ಚುನಾವಣೆ ಎದುರಿಸುತ್ತಿದ್ದೀರಲ್ಲವೇ?
- ಮೊದಲು ಪ್ರಬಲ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಬಯಸಿದ್ದರು. ಅವರನ್ನು ಡಿಸ್ಟರ್ಬ್ ಮಾಡಲು ಇಷ್ಟವಿರಲಿಲ್ಲ. ಆದರೆ, ಪಕ್ಷದ ವರಿಷ್ಠರು ಚುನಾವಣೆಯನ್ನು ನಾವು ಎದುರಿಸುತ್ತೇವೆ. ನೀವು ಸ್ಪರ್ಧೆ ಮಾಡಬೇಕೆಂದರು. ಭವಿಷ್ಯದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ನಿಮ್ಮಂತಹವರು ಅಭ್ಯರ್ಥಿಯಾಗಬೇಕು ಎಂಬುದು ಪಕ್ಷದ ನಿರ್ಧಾರವೆಂದು ವರಿಷ್ಠರು ಹೇಳಿದರು. ಅವರ ಮಾತಿಗೆ ಬದ್ಧನಾಗಿ ಅಖಾಡಕ್ಕಿಳಿದಿದ್ದೇನೆ.
* ಕಳೆದ ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷಕ್ಕಾದ ಡ್ಯಾಮೇಜ್ ಇನ್ನೂ ಸರಿಯಾಗಿಲ್ಲವಂತೆ?
-ಆ ಉಪಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ತಪ್ಪಾಯಿತು. ನನ್ನನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ವರಿಷ್ಠರು ಅಂತಿಮಗೊಳಿಸಿದ್ದರು. ಅಷ್ಟರಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪರವರ ಪುತ್ರ ಚಂದ್ರಶೇಖರ್ ಪಕ್ಷಕ್ಕೆ ಬರುತ್ತಿದ್ದಾರೆ, ಇದರಿಂದ ಸ್ಥಳೀಯವಾಗಿ ಪಕ್ಷಕ್ಕೆ ಬಲ ಬರುತ್ತದೆ ಎಂದು ಸ್ಥಳೀಯ ನಾಯಕರು ಹೇಳಿದ್ದರು. ಸಜ್ಜನ ರಾಜಕಾರಣಿಯ ಮಗನಾಗಿದ್ದ ಕಾರಣ ನಾವೂ ಸುಮ್ಮನಾದೆವು. ಆದರೆ, ದುರ್ದೈವ ಅವನು ಯುದ್ಧ ಭೂಮಿಯಲ್ಲಿ ಶಸ್ತ್ರ ತ್ಯಾಗ ಮಾಡಿ ಬೆನ್ನು ತೋರಿದ. ಸ್ಥಳೀಯ ನಾಯಕರ ನಿರ್ಧಾರದಿಂದ ಪಕ್ಷಕ್ಕೆ ಮುಜುಗರವಾಗಿದ್ದು ಖಂಡಿತ ನಿಜ.
* ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಮತ್ತವರ ಪುತ್ರಿ ನಿಶಾ ಅವರ ಪೈಕಿ ಒಬ್ಬರಿಗೆ ಟಿಕೆಟ್ ಖಚಿತ ಎನ್ನಲಾಗುತ್ತಿತ್ತು?
- ನಾನು ಸಹ ಯೋಗೇಶ್ವರ್ ಅವರಿಗೆ ಅಭ್ಯರ್ಥಿಯಾಗುವಂತೆ ಮನವಿ ಮಾಡಿದ್ದೆ. ಆಮೇಲೆ ಯೋಗೇಶ್ವರ್‌ರವರು ಪುತ್ರಿ ನಿಶಾಗೆ ಟಿಕೆಟ್ ಕೇಳಿದ್ದರು. ಆದರೆ ಯೋಗೇಶ್ವರ್ ಸ್ಪರ್ಧೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ವರಿಷ್ಠರು ನನ್ನ ಹೆಸರನ್ನು ಅಂತಿಮಗೊಳಿಸಿದರು. ಅವರಿಗೆ ನಾವ್ಯಾರೂ ಟಿಕೆಟ್ ತಪ್ಪಿಸಲಿಲ್ಲ.
* ಮೈತ್ರಿ ಪಕ್ಷಗಳ ಅಭ್ಯರ್ಥಿ ಸುರೇಶ್ ಹಣಬಲ, ತೋಳ್ಬಲದಲ್ಲಿ ಬಲಾಢ್ಯರು. ನೀವು ಅವರನ್ನು ಹೇಗೆ ಎದುರಿಸುತ್ತೀರಿ?
- ಡಿ.ಕೆ. ಸಹೋದರರದು ಏನೇ ಅಟ್ಟಹಾಸ, ದುಡ್ಡಿನ ಮದ ಇರಲಿ. ಮತದಾರರ ಮನಸ್ಸು ಮತ್ತು ನಿರ್ಧಾರವೇ ಬೇರೆಯಾಗಿದೆ. ಜೆಡಿಎಸ್‌ನವರು ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡುವ ಮನೋಭಾವದಲ್ಲಿ ಇಲ್ಲ.
* ಬಿಜೆಪಿಗೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಹೊರತುಪಡಿಸಿದರೆ ಬೇರೆಲ್ಲೂ ಅಸ್ತಿತ್ವವೇ ಇಲ್ಲವಲ್ಲ?
-ಪ್ರತಿಯೊಂದು ಪಕ್ಷಕ್ಕೂ ಕಮಿಟೆಡ್ ವರ್ಕರ್ಸ್ ಮತ್ತು ಕಮಿಟೆಡ್ ವೋಟರ್ಸ್ ಇರುತ್ತಾರೆ. ಅಂತಹ ಕಡೆಗಳಲ್ಲಿ ಅಭ್ಯರ್ಥಿ ನಗಣ್ಯ. ಕಮಿಟ್‌ಮೆಂಟ್ ಇರುವ ಪಕ್ಷಕ್ಕೆ ವೋಟು ಹಾಕುತ್ತಾರೆ. ರಾಮನಗರ ಕ್ಷೇತ್ರದಲ್ಲಿ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಭ್ಯರ್ಥಿ ಇದ್ದಾಗ 3 ಸಾವಿರ ಮತಗಳು ಬಂದಿದ್ದವು. ಅದೇ ನಂತರ ನಡೆದ ಉಪಚುನಾವಣೆಯಲ್ಲಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದರೂ 16 ಸಾವಿರ ಮತಗಳು ಲಭಿಸಿದವು. ಇದು ಕಾಂಗ್ರೆಸ್-ಜೆಡಿಎಸ್ ವಿರುದ್ಧವಾಗಿ ಮತದಾರರು ಮನಸ್ಸು ಮಾಡಿರುವುದನ್ನು ತೋರಿಸುತ್ತದೆ. ಈ ಕ್ಷೇತ್ರದಲ್ಲಿ ನಮಗೆ ಗ್ರೌಂಡ್ ನೆಟ್‌ವರ್ಕ್ ತುಂಬಾ ಚೆನ್ನಾಗಿದೆ. ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಆನೇಕಲ್ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಬಲವಾಗಿದೆ. ಇಲ್ಲಿ ಹೆಚ್ಚಿನ ಮತ ಲಭಿಸುವ ವಿಶ್ವಾಸವಿದೆ. ಕಳೆದ ಎರಡು ಸಂಸತ್ ಚುನಾವಣೆಯಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರೊಂದಿಗೆ ಇದ್ದರು. ಈ ಬಾರಿ ನಮ್ಮೊಂದಿಗಿದ್ದಾರೆ. ಮಾಗಡಿ ಮತ್ತು ಚನ್ನಪಟ್ಟಣ ಕ್ಷೇತ್ರಗಳ ಜವಾಬ್ದಾರಿ ತೆಗೆದುಕೊಂಡಿದ್ದಾರೆ.
* ಪ್ರಧಾನಿ ಮೋದಿ ಅವರ ಐದು ವರ್ಷದ ಸಾಧನೆ ಶೂನ್ಯ ಎಂದು ಪ್ರತಿಪಕ್ಷಗಳ ನಾಯಕರು ಹೇಳುತ್ತಿದ್ದಾರೆ?
-ಮೋದಿ ಅವರು ಭಾರತದ ಪ್ರಧಾನಿಯಾಗಿ ಅಲ್ಲ, ಯೂನಿವರ್ಸಲ್ ಲೀಡರ್ ಆಗಿ ಪ್ರೊಜೆಕ್ಟ್ ಆಗಿದ್ದಾರೆ. ಜಗತ್ತಿನ ಬೇರೆ ಬೇರೆ ರಾಷ್ಟ್ರಗಳ ಅಧ್ಯಕ್ಷರು ಮೋದಿ ಮತ್ತೊಮ್ಮೆ ಭಾರತದ ಪ್ರಧಾನಿ ಆಗಬೇಕೆಂದು ಹೇಳುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಿದೆ. ದೇಶದ ಶಕ್ತಿ ಏನೆಂಬ ಸಂದೇಶ ಶತ್ರು ರಾಷ್ಟ್ರಗಳಿಗೆ ಗೊತ್ತಾಗಿದೆ. ಶೂನ್ಯ ಸಾಧನೆ ಎನ್ನುವವರಿಗೆ ಈ ಚುನಾವಣೆಯಲ್ಲಿಯೇ ಜನರು ಉತ್ತರ ಕೊಡುತ್ತಾರೆ.
* ಚುನಾವಣೆಯಲ್ಲಿ ಸೋಲಿನ ಭಯದಿಂದ ‘ಪ್ರಧಾನಮಂತ್ರಿ ಕೃಷಿ ಸಮ್ಮಾನ್’ ಯೋಜನೆ ಜಾರಿಗೆ ತಂದಿದ್ದೀರಿ ಎಂಬ ಆರೋಪವಿದೆಯಲ್ಲ?
- ಮೀನು, ಹೈನುಗಾರಿಕೆ, ಹಸು ಸಾಲವನ್ನು ಈವರೆಗೂ ಕೃಷಿಯೆಂದು ಪರಿಗಣಿಸಿಲ್ಲ. ಮೈತ್ರಿ ಸರ್ಕಾರದ ರೈತರ ಸಾಲಮನ್ನಾದಿಂದ 43 ಲಕ್ಷ ರೈತರಲ್ಲಿ 15ರಿಂದ 20 ಲಕ್ಷ ಮಂದಿ ಫಲಾನುಭವಿ ಆಗುತ್ತಾರೆ. ಪ್ರತಿ ವರ್ಷ ನೀರಾವರಿ ಇಲಾಖೆಯಲ್ಲಿ 15 ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ಇದರಿಂದ ಒಣಭೂಮಿ ರೈತನಿಗೆ ಉಪಯೋಗ ಆಗುತ್ತಿಲ್ಲ. ಹಾಗೆಯೇ ಸಾಲಮನ್ನಾದಿಂದ ಎಲ್ಲಾ ರೈತರಿಗೂ ಅನುಕೂಲವಾಗಲ್ಲ. ಆದರೆ, ಕೃಷಿ ಸಮ್ಮಾನ್ ಯೋಜನೆಯಲ್ಲಿ ನಾಲ್ಕು ತಿಂಗಳಿಗೆ 2 ಸಾವಿರ ರುಪಾಯಿ ಪ್ರತಿಯೊಂದು ವರ್ಗದ ರೈತನಿಗೆ ಸಿಕ್ಕಿದರೆ ಮರಳುಗಾಡಿನಲ್ಲಿ ನೀರು ಸಿಕ್ಕಿದಷ್ಟೇ ಖುಷಿಯಾಗಿ ರಿಲೀಫ್ ಅನಿಸುತ್ತದೆ.
* ನೋಟು ಅಮಾನ್ಯದಿಂದ ಎಷ್ಟುಕಪ್ಪು ಹಣ ಸಿಕ್ಕಿತು? ವಿದೇಶದಲ್ಲಿನ ಕಪ್ಪು ಹಣವೇಕೆ ತರಲಿಲ್ಲ ಎಂಬ ಪ್ರಶ್ನೆಗಳು ಆಗಾಗ ತೂರಿ ಬರುತ್ತಿವೆ?
-ನೋಟು ಅಮಾನ್ಯದಿಂದ ದೇಶಕ್ಕೊಂದು ಅಕೌಂಟೆಬಿಲಿಟಿ ಬಂದಿತು. ಮೊದಲು ಬ್ಯಾಂಕಿನಲ್ಲಿ ಮೂರ್ನಾಲ್ಕು ಲಕ್ಷ ಕೋಟಿ ರು. ಟರ್ನ್ ಓವರ್ ಆಗುತ್ತಿತ್ತು. ಈಗ ಬ್ಲಾಕ್ ಮನಿ ರೂಪದಲ್ಲಿದ್ದ 17 ಲಕ್ಷ ಕೋಟಿ ರು. ಬ್ಯಾಂಕಿಗೆ ಜಮಾ ಆಗಿ ಟರ್ನ್ ಓವರ್ ಆಗುತ್ತಿದೆ. ದೇಶದಲ್ಲಿ ಒಂದೂಕಾಲು ಕೋಟಿಯಿಂದ ನಾಲ್ಕು ಕೋಟಿ ಜನರು ತೆರಿಗೆ ಪಾವತಿದಾರರ ಪಟ್ಟಿಗೆ ಬಂದಿದ್ದಾರೆ. ಇದು ಸಾಧನೆ ಅಲ್ಲವೇ.
* ಸೈನಿಕರ ಸಾಧನೆಯನ್ನು ತಮ್ಮ ಸಾಧನೆಯೆಂದು ಬಿಜೆಪಿಯವರು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರಂತೆ?
-ಸೈನಿಕರ ಸಾಧನೆಯನ್ನು ನಮ್ಮ ಸಾಧನೆಯೆಂದು ಹೇಳಲು ಸಾಧ್ಯವೇ ಇಲ್ಲ. ಆ ಕೆಲಸವನ್ನು ನಾವು ಮಾಡುತ್ತಲೂ ಇಲ್ಲ. ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ನಾಯಕತ್ವ ದೇಶಕ್ಕೆ ಬೇಕಿತ್ತು. ಅದು ನರೇಂದ್ರ ಮೋದಿ ರೂಪದಲ್ಲಿ ಸಿಕ್ಕಿದೆ. ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಪ್ಲಾನ್ ಮೋದಿರವರು ಮಾಡಲಿಲ್ಲ. ಆ ಬಗ್ಗೆ ಸೈನಿಕರು ತೀರ್ಮಾನ ತೆಗೆದುಕೊಂಡಾಗ ಪ್ರಧಾನಿ ಮೋದಿ ಒಪ್ಪಿಗೆ ಸೂಚಿಸಿ ಧೈರ್ಯ ತುಂಬುವ ಕೆಲಸ ಮಾಡಿದರು. ಈ ಹಿಂದೆ ಶರದ್ ಪವಾರ್ ರಕ್ಷಣಾ ಸಚಿವರಾಗಿದ್ದಾಗ ಪಾಕಿಸ್ತಾನ ಹೀಗೆಯೇ ಕಿತಾಪತಿ ತೆಗೆಯುತ್ತಿದ್ದರೆ ಭೂಪಟದಲ್ಲಿ ಇಲ್ಲವಾಗಿಸಬೇಕಾಗುತ್ತದೆ ಎಂದಿದ್ದರು. ಜಾಜ್‌ರ್ ಫರ್ನಾಂಡಿಸ್, ಪರ್ರಿಕರ್, ನಿರ್ಮಲಾ ಸೀತಾರಾಮನ್ ಅವರು ಯೋಧರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ಸೈನಿಕರ ವಿಚಾರವನ್ನು ಬಿಜೆಪಿಯವರು ಚುನಾವಣೆ, ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆಂದು ವಿಪಕ್ಷಗಳು ಸೋಲಿನ ಭೀತಿಯಲ್ಲಿ ಸುಳ್ಳು ಆರೋಪ ಮಾಡುತ್ತಿವೆ ಅಷ್ಟೆ.
* ಚುನಾವಣೆಯಲ್ಲಿ ಗೆಲವು ಸಾಧಿಸಲು ಬಿಜೆಪಿ ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪವಿದೆಯಲ್ಲ?
- ನಿಮ್ಮ ಮನೆ, ನಮ್ಮ ಮನೆ ಮೇಲೆ ಏಕೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡುತ್ತಿಲ್ಲ. ಆದಾಯ ತೆರಿಗೆ ಇಲಾಖೆ ತನ್ನ ಇತಿಮಿತಿಯಲ್ಲಿ ಕೆಲಸ ಮಾಡುತ್ತದೆ. ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದಾಗ ಮಾಡಿದ್ದುಣ್ಣೊ ಮಾರಾಯ ಅಂದಿದ್ದರು. ಈಗ ಇವರಿಬ್ಬರು ಒಂದಾದ ಮಾತ್ರಕ್ಕೆ ದಾಳಿ ಮಾಡಿದರೆ ಅದನ್ನು ರಾಜಕೀಯ ಪ್ರೇರಿತ ದಾಳಿ ಎಂದರೆ ಏನರ್ಥ. ಸಾಂವಿಧಾನಿಕ ಸಂಸ್ಥೆಗಳಾದ ಸಿಬಿಐ, ಇಡಿ, ಐಟಿ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ಅವರೆಲ್ಲರೂ ನಾಲ್ಕೈದು ತಿಂಗಳು ಸಮಗ್ರವಾಗಿ ಮಾಹಿತಿ ಕಲೆ ಹಾಕಿ ದಾಳಿ ನಡೆಸುತ್ತಾರೆ.
* ಚುನಾವಣೆಯಲ್ಲಿ ಗೆಲುವು ಸಾಧಿಸಿದಲ್ಲಿ ಕ್ಷೇತ್ರಕ್ಕಾಗಿ ಏನು ಮಾಡುವಿರಿ?
- ಇಲ್ಲಿ ರೇಷ್ಮೆ ಮತ್ತು ಮಾವು ಪ್ರಧಾನ ಬೆಳೆ. ಈ ಬೆಳೆಗಾರರ ರಕ್ಷಣೆ ಮಾಡುವುದು. ನೀರಾವರಿ ಯೋಜನೆ, ಮೇಕೆದಾಟು ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ತರುವುದು. ಕೇಂದ್ರ ಸರ್ಕಾರದ ಇಲಾಖೆಗಳಿಂದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಒತ್ತು ನೀಡುತ್ತೇನೆ.